ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಎಲ್ಲ ರೀತಿಯ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ನಾಲ್ಕೈದು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಹಿತಿ ನೀಡಿದ್ದಾರೆ.
10 ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ನಡೆಸುತ್ತಿರುವ ವರ್ಚುವಲ್ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದರು. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಹಾಗೂ ಬಿಗಿ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಮತ್ತಷ್ಟು ರೆಮ್ಡೆಸಿವಿರ್, ಆಕ್ಸಿಜನ್ ಹಾಗೂ ಲಸಿಕೆ ಪೂರೈಸುವಂತೆ ಮನವಿ ಮಾಡಿದರು.
1 ಕೋಟಿ ಲಸಿಕೆ ಖರೀದಿಸುವ ನಿರ್ಧಾರದ ಬಗ್ಗೆಯೂ ಮಾಹಿತಿ ನೀಡಿದ ಸಿಎಂ ಯಡಿಯೂರಪ್ಪ, ಲಸಿಕೆ ಅಭಿಯಾನ ಪ್ರಗತಿಯ ವಿವರ ನೀಡಿದರು. ರಾಜ್ಯದಲ್ಲಿನ ಬಿಗಿ ಕ್ರಮಗಳಿಂದಾಗಿ ನಾಲ್ಕೈದು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ ಎಂದು ಪ್ರಧಾನಿಗೆ ವಿವರಿಸಿದರು.
ಮಹಾರಾಷ್ಟ್ರಕ್ಕೆ ಆಕ್ಸಿಜನ್ ಸಿಲಿಂಡರ್ ಏರ್ ಲಿಫ್ಟ್ ಮಾಡುವಂತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಪ್ರಧಾನಿ ಮೋದಿಗೆ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಒತ್ತಾಯಿಸಿದರು. ಮಹಾರಾಷ್ಟ್ರದಲ್ಲಿ ಆಕ್ಸಿಜನ್ ಸಾಕಾಗುತ್ತಿಲ್ಲ. ಕೂಡಲೇ ವಾಯುಪಡೆಯ ವಿಮಾನದ ಮೂಲಕ ಆಕ್ಸಿಜನ್ ಟ್ಯಾಂಕರ್ಗಳನ್ನು ಏರ್ ಲಿಫ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ. ಆದರೆ ರಾಜ್ಯದ ಪರ ಸಿಎಂ ಯಡಿಯೂರಪ್ಪ ಸಹ ಮನವಿ ಮಾಡಿ ಬೇಡಿಕೆ ಇಟ್ಟಿದ್ದಾರೆ.
ಅಂತಾರಾಜ್ಯ ಆಕ್ಸಿಜನ್ ಸರಬರಾಜು ಬಗ್ಗೆ ರಾಜ್ಯಗಳು ಕ್ರಮ ವಹಿಸುವಂತೆ ವಿಡಿಯೋ ಕಾನ್ಫರೆನ್ಸ್ನಲ್ಲಿ ಸಿಎಂಗಳಿಗೆ ಪ್ರಧಾನಿ ಮೋದಿ ಸೂಚನೆ ನೀಡಿದ್ದು, ಅಗತ್ಯ ಬಿದ್ದಾಗ ಹೆಚ್ಚುವರಿ ಆಕ್ಸಿಜನ್ ಸಿಲಿಂಡರ್ಗಳನ್ನು ರಾಜ್ಯಗಳ ನಡುವೆ ಹಂಚಿಕೊಳ್ಳುವ ಬಗ್ಗೆಯೂ ಗಮನ ಹರಿಸಿ ಎಂದು ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.