ಬೆಂಗಳೂರು: ರಾಜ್ಯಸಭೆ ಸದಸ್ಯ ಅಶೋಕ್ ಗಸ್ತಿ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಪುಟ ಸಹೋದ್ಯೋಗಿಗಳು ಪಕ್ಷಕ್ಕೆ ಗಸ್ತಿ ಸಲ್ಲಿಸಿದ್ದ ಸೇವೆ ಸ್ಮರಿಸಿ ಸಂತಾಪ ಸೂಚಿಸಿದ್ದಾರೆ.
ಸಂಸತ್ ಸದಸ್ಯರು, ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಅಶೋಕ್ ಗಸ್ತಿ ನಿಧನರಾದ ಸುದ್ದಿ ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಅಕಾಲಿಕ ನಿಧನದ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ, ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ. ಓಂ ಶಾಂತಿ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಡಿಸಿಎಂ ಗೋವಿಂದ ಕಾರಜೋಳ ಸಹ ಸಂತಾಪ ಸೂಚಿಸಿದ್ದಾರೆ. ಅಶೋಕ ಗಸ್ತಿ ಬಿಜೆಪಿ ಪಕ್ಷದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷರಾಗಿ, ಹಿಂದುಳಿದ ವರ್ಗಗಳ ನಿಗಮದ ಅಧ್ಯಕ್ಷರಾಗಿ ಗುರುತರವಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದುಳಿದ ವರ್ಗಗಳ, ದುರ್ಬಲರ, ಅಶಕ್ತರ ಏಳಿಗೆಗಾಗಿ ಅವರು ಶ್ರಮಿಸಿದ್ದಾರೆ. ಅವರ ನಿಧನದಿಂದ ತುಂಬಲಾರದ ನಷ್ಟವುಂಟಾಗಿದೆ ಎಂದಿದ್ದಾರೆ.
ಡಿಸಿಎಂಗಳಾದ ಲಕ್ಷ್ಮಣ ಸವದಿ, ಅಶ್ವತ್ಥನಾರಾಯಣ್, ಸಚಿವರಾದ ಈಶ್ವರಪ್ಪ, ಸುಧಾಕರ್ ಅಶೋಕ್ ಗಸ್ತಿ ಆತ್ಮಕ್ಕೆ ಸದ್ಗತಿ ದೊರಕಲಿ ಮತ್ತು ಅವರ ಕುಟುಂಬ ಸದಸ್ಯರಿಗೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.