ಬೆಂಗಳೂರು : ಸಿಎಂ ಯಡಿಯೂರಪ್ಪ ಹಠಾತ್ ದೆಹಲಿ ಭೇಟಿ ಮೂಲಕ ನಾಯಕತ್ವ ಬದಲಾವಣೆ ಸಂಬಂಧ ಎದ್ದಿದ್ದ ಕಿಚ್ಚು ಮತ್ತೆ ತಣ್ಣಗಾಗಿದೆ. ಹೈಕಮಾಂಡ್ ಭೇಟಿ ಬಳಿಕ ರಾಜೀನಾಮೆ ನೀಡುವ ಪ್ರಶ್ನೆನೇ ಇಲ್ಲ ಎಂದು ಸ್ಪಷ್ಟವಾಗಿ ಹೇಳುವ ಮೂಲಕ ಯಡಿಯೂರಪ್ಪ ತನ್ನ ಸಿಎಂ ಸ್ಥಾನ ಅಬಾಧಿತ ಎಂಬ ಸಂದೇಶ ರವಾನೆ ಮಾಡಿದ್ದಾರೆ. ಇದರ ಮಧ್ಯೆ ಸ್ವತಃ ಯಡಿಯೂರಪ್ಪನವರೇ ಅನಾರೋಗ್ಯದ ಹಿನ್ನೆಲೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ಸಿಎಂ ಪುತ್ರರ ಸಮೇತರಾಗಿ ದೆಹಲಿ ಭೇಟಿ ರಾಜ್ಯ ರಾಜಕಾರಣದಲ್ಲಿ ಹಲವು ಕುತೂಹಲವನ್ನು ಎಬ್ಬಿಸಿತ್ತು. ನಾಯಕತ್ವ ಬದಲಾವಣೆಯ ಸುದ್ದಿ ಮತ್ತೆ ದೊಡ್ಡದಾಗಿ ಸದ್ದು ಮಾಡಿತ್ತು. ಯಾವುದೇ ಸಚಿವರಿಲ್ಲದೆ ಬರೇ ಪುತ್ರ ವಿಜಯೇಂದ್ರ ಜತೆಗೂಡಿ ದೆಹಲಿ ಭೇಟಿ ಮಾಡಿರೋದು ಬಹುತೇಕ ಸಚಿವರಲ್ಲೂ ಆತಂಕ ಮೂಡಿಸಿತ್ತು.
ಮತ್ತೆ ಸಿಎಂ ಬದಲಾವಣೆಯ ಕೂಗು ರಾಜ್ಯ ರಾಜಕೀಯದಲ್ಲಿ ಜೋರಾಗಿ ಕೇಳಿ ಬಂದಿತ್ತು. ನಿನ್ನೆ ಸಂಜೆ ಪ್ರಧಾನಿ ಮೋದಿ ಭೇಟಿ ಆಗುವವರೆಗೆ ನಾಯಕತ್ವ ಬದಲಾವಣೆಯ ಗೊಂದಲ ಮತ್ತಷ್ಟು ತೀವ್ರವಾಗಿತ್ತು. ಆದರೆ, ಪ್ರಧಾನಿ ಮೋದಿ, ಜೆ ಪಿ ನಡ್ಡಾ, ಅಮಿತ್ ಶಾ ಅವರನ್ನ ಭೇಟಿಯಾಗಿದ್ದರು ಸಿಎಂ ಯಡಿಯೂರಪ್ಪ. ಈ ಭೇಟಿ ವೇಳೆ ತಮ್ಮ ರಾಜೀನಾಮೆಗೆ ಈ ಮೂವರು ನಾಯಕರುಗಳು ಯಾವುದೇ ಸೂಚನೆ ನೀಡಿಲ್ಲ ಎಂಬ ಹೇಳಿಕೆ ನೀಡುವ ಮೂಲಕ ನಾಯಕತ್ವ ಬದಲಾವಣೆ ವದಂತಿಗೆ ಸದ್ಯಕ್ಕೆ ಯಡಿಯೂರಪ್ಪ ತೆರೆ ಎಳೆದಿದ್ದಾರೆ.
ಬಂಡಾಯ ಬಣಕ್ಕೆ ಸಂದೇಶ : ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಹೈ ಕಮಾಂಡ್ನಿಂದ ರಾಜೀನಾಮೆಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಸಿಎಂ ದೆಹಲಿ ಅಂಗಳದಲ್ಲಿ ನಿಂತು ಸ್ಪಷ್ಟವಾಗಿ ತಿಳಿಸಿದ್ದಾರೆ. ಆ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ಸದ್ಯ ಯಡಿಯೂರಪ್ಪ ತೆರೆ ಎಳೆದಿದ್ದಾರೆ. ಪುತ್ರ ವಿಜಯೇಂದ್ರ ಜತೆಗೆ ದೆಹಲಿಗೆ ಹೋಗಿ ಬಿಜೆಪಿ ವರಿಷ್ಠರನ್ನು ಒಬ್ಬೊಬ್ಬರನ್ನಾಗಿ ಭೇಟಿಯಾದರು. ಪ್ರಧಾನಿ ಮೋದಿ ಆದಿಯಾಗಿ ಭೇಟಿಯಾದ ಎಲ್ಲಾ ಬಿಜೆಪಿ ನಾಯಕರು ರಾಜೀನಾಮೆ ನೀಡುವಂತೆ ಎಲ್ಲೂ ಸೂಚಿಸಿಲ್ಲ. ರಾಜೀನಾಮೆ ಸುದ್ದಿ ಸತ್ಯಕ್ಕೆ ದೂರವಾಗಿದೆ. ಅದಕ್ಕೆ ಯಾವುದೇ ಬೆಲೆ ಇಲ್ಲ ಎಂದು ಕಡಾಖಂಡಿತವಾಗಿ ಸ್ಪಷ್ಟಪಡಿಸಿದ್ದಾರೆ ಬಿಎಸ್‌ವೈ.
ಇದನ್ನೂ ಓದಿ: ರಾಜೀನಾಮೆ ವದಂತಿ: ವರದಿಯಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದ ಸಿಎಂ BSY
ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿರುವುದರ ಜೊತೆಗೆ ರಾಜ್ಯದಲ್ಲಿ ಪಕ್ಷ ಸಂಘಟನೆಯ ಹೊಣೆಯನ್ನು ಹೊರಿಸಿರುವುದಾಗಿ ತಿಳಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಂತೆ ನೋಡಿಕೊಳ್ಳುವುದು ನಿಮ್ಮ ಹೊಣೆ ಎಂದು ಜೆಪಿ ನಡ್ಡಾ, ಪ್ರಧಾನಿ ಮೋದಿ ಸೂಚನೆ ನೀಡಿದ್ದಾರೆ. ಪಕ್ಷ ಬಲವರ್ಧನೆಯ ಹೊಣೆ ತಮಗೇ ವಹಿಸಿದ್ದಾರೆ ಎಂದು ಹೇಳುವ ಮೂಲಕ ಹೈಕಮಾಂಡ್ ಇನ್ನೂ ತಮ್ಮ ಪಕ್ಷ ಸಂಘಟನೆ ಹಾಗೂ ನಾಯಕತ್ವದ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂಬ ಸಂದೇಶವನ್ನು ವಿರೋಧಿ ಬಣಕ್ಕೆ ರವಾನಿಸಿದ್ದಾರೆ.
ಸ್ವತಃ ಬಿಎಸ್ವೈಯಿಂದ ರಾಜೀನಾಮೆ ಇಂಗಿತ?: ಅತ್ತ ಸಿಎಂ ಯಡಿಯೂರಪ್ಪ ರಾಜೀನಾಮೆಯ ಪ್ರಶ್ನೆಯೇ ಇಲ್ಲ ಎಂದು ಖಚಿತತೆಯಿಂದ ಹೇಳುತ್ತಿರುವಾಗಲೇ ಇತ್ತ ಸಿಎಂ ಯಡಿಯೂರಪ್ಪ ಅನಾರೋಗ್ಯದ ಹಿನ್ನೆಲೆ ಸ್ವತಃ ಅವರೇ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.
ನಿನ್ನೆ ಪ್ರಧಾನಿ ಮೋದಿ ಭೇಟಿ ವೇಳೆ ಯಡಿಯೂರಪ್ಪ ಅವರು ಅನಾರೋಗ್ಯ ಹಾಗೂ ವಯಸ್ಸಿನ ಹಿನ್ನೆಲೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಈ ಸಂಬಂಧ ಹೈಕಮಾಂಡ್ ಈ ಬಗ್ಗೆ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಜುಲೈ 26ಕ್ಕೆ ನಾಯಕತ್ವ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಕೂಗು ಕೇಳಿ ಬರುತ್ತಿದೆ.
ಆಗಸ್ಟ್ ಮೊದಲ ವಾರದಲ್ಲಿ ಮತ್ತೆ ದೆಹಲಿ ಭೇಟಿ ನೀಡುವುದಾಗಿ ಸಿಎಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಆ ವೇಳೆ ಹೈಕಮಾಂಡ್ ರಾಜೀನಾಮೆಯ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ, ಸಿಎಂ ಇದನ್ನ ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ. ಭೇಟಿ ವೇಳೆ ಯಾವುದೇ ನಾಯಕರು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿಲ್ಲ.
ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಭೇಟಿ ಬಳಿಕವೂ ಸಿಎಂ ರಾಜೀನಾಮೆ ನೀಡುವ ವಿಚಾರ ಸತ್ಯಕ್ಕೆ ದೂರ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಆ ಮೂಲಕ ಸದ್ಯ ನಾಯಕತ್ವ ಬದಲಾವಣೆಯ ಚರ್ಚೆಗೆ ತೆರೆ ಎಳೆಯಲು ಯತ್ನಿಸಿದ್ದಾರೆ.
ಇದನ್ನೂ ಓದಿ: ಮುಖ್ಯಮಂತ್ರಿ ಯಡಿಯೂರಪ್ಪ ಸಂತ ಸೇವಾಲಾಲ್ ಪ್ರತಿರೂಪ.. ಸಚಿವ ಪ್ರಭು ಚೌಹಾಣ್ ಹೊಗಳಿಕೆ