ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಆಟೋದಲ್ಲಿ ಸಂಚರಿಸಿ ಗಮನ ಸೆಳೆದರು. ಗೃಹ ಕಚೇರಿ ಕೃಷ್ಣಾದ ಆವರಣದಲ್ಲಿ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಜೊತೆ ಆಟೋ ಸವಾರಿ ಮಾಡಿದರು.
ಸನ್ ಮೊಬೈಲಿಟಿ ಹೊರತಂದಿರುವ ಬೆಂಗಳೂರಿನ ಮೊಟ್ಟಮೊದಲ ಎಲೆಕ್ಟ್ರಿಕ್ ವಾಹನಗಳ ಸ್ವಾಪ್ ಪಾಯಿಂಟ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ಮಾಡಿದರು. ನಂತರ ವಿದ್ಯುತ್ ಚಾಲಿತ ಆಟೋದಲ್ಲಿ ಕುಳಿತರು. ಸಿಎಂಗೆ ಬಿಬಿಎಂಪಿ ಆಡಳಿತಾಧಿಕಾರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಸಾಥ್ ನೀಡಿದರು. ಸಿಎಂ ಬಿಎಸ್ವೈ ಹಾಗೂ ಗುಪ್ತಾರನ್ನು ಮಹಿಳಾ ಚಾಲಕಿಯೊಬ್ಬರು ಗೃಹ ಕಚೇರಿ ಆವರಣದಲ್ಲೇ ಸುತ್ತು ಹಾಕಿಸಿದರು. ಮತ್ತೊಂದು ಆಟೋದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸಂಚರಿಸಿದರು. ವಿದ್ಯುತ್ ಚಾಲಿತ ಆಟೋ ರೈಡ್ ಮಾಡಿ ಸಿಎಂ ಖುಷಿಯಾದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವಿದ್ಯುತ್ ಬ್ಯಾಟರಿಯಿಂದ ಚಾಲನೆಯಾಗುವ ಆಟೋ ರಿಕ್ಷಾ ಬೆಂಗಳೂರು ಜನರಿಗೆ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಈ ಆಟೋ ರಿಕ್ಷಾವನ್ನ ಜನರು ಇಷ್ಟಪಡಲಿದ್ದಾರೆ. ಪರಿಸರ ಮಾಲಿನ್ಯ ತಡೆಗೂ ಈ ಆಟೋ ಅನುಕೂಲವಾಗಲಿದೆ ಎಂದರು. ಭವಿಷ್ಯದಲ್ಲಿ ವಿದ್ಯುತ್ ಚಾಲಿತ ಆಟೋಗಳ ಸಂಖ್ಯೆ ಹೆಚ್ಚಾಗುವ ಅಪೇಕ್ಷೆ ವ್ಯಕ್ತಪಡಿಸಿದ ಸಿಎಂ, ಆಟೋಗೆ 42 ಸಾವಿರ ಸಬ್ಸಿಡಿಯನ್ನು ನೀಡಲಾಗುತ್ತದೆ ಎಂದರು.
ಇದನ್ನೂ ಓದಿ:ದೊಡ್ಡ ಪ್ರಮಾಣದಲ್ಲಿ ಹೊಸ ವರ್ಷಾಚರಣೆಯಿಲ್ಲ; ನೈಟ್ ಕರ್ಫ್ಯೂ ಅಗತ್ಯವಿಲ್ಲ: ಬಿಎಸ್ವೈ