ಬೆಂಗಳೂರು: ಇಂದಿರಾ ಕ್ಯಾಂಟಿನ್‌ನಲ್ಲಿ ನೀಡುತ್ತಿದ್ದ ತಿಂಡಿ, ಊಟ ನಿಲ್ಲಿಸಿರುವ ವಿಷಯದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.
ಸಿದ್ದರಾಮಯ್ಯ ಇಂದಿರಾ ಕ್ಯಾಂಟೀನ್ ಊಟ ನಿಲ್ಲಿಸಿರುವ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆ ಸಿಎಂ ಬಿಎಸ್ವೈ ದೂರವಾಣಿ ಕರೆ ಮಾಡಿ, ಊಟ, ತಿಂಡಿ ಉಚಿತವಾಗಿ ನೀಡಲಾಗುತ್ತಿತ್ತು. ಆದರೆ ದುರುಪಯೋಗವಾದ ಕಾರಣ ದರ ನಿಗದಿ ಮಾಡಿರುವುದಾಗಿ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ದುರುಪಯೋಗವಾಗದಂತೆ ಊಟ, ತಿಂಡಿಯನ್ನು ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಉಚಿತವಾಗಿ ನೀಡಿ, ದುರುಪಯೋಗಕ್ಕೆ ಅವಕಾಶ ಮಾಡಿಕೊಡುವ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಹೇಳಿದರು. ಈ ಕುರಿತು ಪರಿಶೀಲನೆ ನಡೆಸುವುದಾಗಿ ಯಡಿಯೂರಪ್ಪ ಅವರು ಮಾತುಕತೆ ವೇಳೆ ಸಿದ್ದರಾಮಯ್ಯ ಅವರಿಗೆ ತಿಳಿಸಿದರು.
ಪ್ಯಾಕೇಜ್ ಘೋಷಿಸಿ:
ಲಾಕ್ಡೌನ್ನಿಂದ ರೈತರು, ಕೃಷಿ ಕೂಲಿ ಕಾರ್ಮಿಕರು, ಜತೆಗೆ ಹಲವಾರು ಕ್ಷೇತ್ರಗಳ ದುಡಿಯುವ ವರ್ಗದವರಿಗೆ ತೊಂದರೆಯಾಗಿದೆ. ಅವರ ನೆರವಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಇದೇ ವೇಳೆ ಸಿದ್ದರಾಮಯ್ಯ ಒತ್ತಾಯಿಸಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿಯವರು, ಪ್ರತಿಪಕ್ಷಗಳ ಸಲಹೆ, ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುವುದಾಗಿ ತಿಳಿಸಿದರು.
![cm-yadirurappa-and-siddaramaiah-talks-about-indira-canteen](https://etvbharatimages.akamaized.net/etvbharat/prod-images/kn-bng-02-siddu-phone-call-cm-script-9020923_06042020132604_0604f_1586159764_791.jpeg)
ದೇಶಪಾಂಡೆ ಪತ್ರ:
ಸಿಎಂ ಯಡಿಯೂರಪ್ಪ ಅವರಿಗೆ ಶಾಸಕ ಆರ್.ವಿ.ದೇಶಪಾಂಡೆ ಪತ್ರ ಬರೆದಿದ್ದು, ಬರ ಪೀಡಿತ ತಾಲೂಕುಗಳಿಗೆ ಕೂಡಲೇ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಬೇಕು. ಈ ತಾಲೂಕುಗಳಲ್ಲಿ ಕುಡಿಯುವ ನೀರಿನ ಕೊರತೆ, ಜಾನುವಾರುಗಳಿಗೆ ಮೇವಿನ ಕೊರತೆ ಕಂಡು ಬರುತ್ತಿದೆ. ಜಿಲ್ಲಾಡಳಿತಕ್ಕೆ ಸೂಕ್ತ ಸೂಚನೆ ನೀಡಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದಲ್ಲದೇ ರಾಜ್ಯ ಸರ್ಕಾರ ಬಿಜೆಟ್ನಲ್ಲಿ ಘೋಷಣೆ ಮಾಡಿದ 4 ಸಾವಿರ ರೂಪಾಯಿ ತಕ್ಷಣ ರೈತರ ಖಾತೆಗಳಿಗೆ ಜಮೆ ಮಾಡಬೇಕು. ಗೊಬ್ಬರ, ಬಿತ್ತನೆ ಬೀಜದ ಕೊರತೆ ಆಗದಂತೆ ನೋಡಿ ಕೊಳ್ಳಬೇಕು. ಕಿಸಾನ್ ಸಮ್ಮಾನ್ ಯೋಜನೆಯನ್ನು ಇತರೆ ಹಿಡುವಳಿದಾರರಿಗೂ ವಿಸ್ತರಿಸಬೇಕು ಎಂದು ದೇಶಪಾಂಡೆ ಮನವಿ ಮಾಡಿದ್ದಾರೆ.