ಬೆಂಗಳೂರು: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ 'ಭಾರತ ರತ್ನ' ಪುರಸ್ಕಾರ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.
ಶಿವಕುಮಾರ ಸ್ವಾಮೀಜಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಸ್ವಾಮೀಜಿಗಳು ಲಿಂಗೈಕ್ಯರಾದ ವೇಳೆ ಸಿಎಂ ಕುಮಾರಸ್ವಾಮಿ ಅವರು ಸ್ವತಃ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡುವುದಾಗಿ ಈ ಹಿಂದೆ ಹೇಳಿದ್ದರು.
ಮೋದಿಗೆ ಸಿಎಂ ಬರೆದ ಪತ್ರದ ಸಾರಾಂಶ :
ತುಮಕೂರಿನ ಸಿದ್ದಗಂಗಾ ಮಠ ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. 1941ರಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠದ ಜವಾಬ್ದಾರಿಯನ್ನು ಹೊತ್ತಿದ್ದರು. 1908ರ ಏಪ್ರಿಲ್ 1 ರಂದು ಶಿವಕುಮಾರ ಸ್ವಾಮೀಜಿಗಳು ಜನಿಸಿದ್ದರು. ಅವರು ಲಿಂಗೈಕ್ಯರಾಗುವವರೆಗೂ ಮಠವನ್ನ ಮುನ್ನಡೆಸಿ, ಸಾಮಾಜಿಕ ಸೇವೆಯಲ್ಲಿ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ.
ಶ್ರೀ ಸಿದ್ದಗಂಗಾ ಶಿಕ್ಷಣ ಸಂಸ್ಥೆ ಸ್ಥಾಪಿಸಿ ದೇಶದ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದು ಬಡ ಜನರಿಗೆ ಶೈಕ್ಷಣಿಕ ಸೇವೆಯನ್ನು ನೀಡಿದ್ದಾರೆ. ಈ ಸಂಸ್ಥೆಗಳು ಸಂಸ್ಕೃತ, ಇಂಜಿನಿಯರಿಂಗ್, ತಂತ್ರಜ್ಞಾನ ಸೇರಿದಂತೆ ಎಲ್ಲಾ ಶಿಕ್ಷಣ ನೀಡಿ ಬಹುದೊಡ್ಡ ಕೊಡುಗೆ ನೀಡುತ್ತಿವೆ. ಅಲ್ಲದೇ ಸಿದ್ದಗಂಗಾ ಮಠ ಕೂಡ ಸುಮಾರು 9 ಸಾವಿರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ ಸೌಲಭ್ಯವನ್ನು ನೀಡಿದೆ. ಏಳು ದಶಕಗಳ ಕಾಲ ಶಿವಕುಮಾರ ಸ್ವಾಮೀಜಿಗಳು ತ್ರಿವಿಧ ದಾಸೋಹಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಸಮಾಜಕ್ಕೆ ಶಿಕ್ಷಣ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣಕ್ಕೆ ಅವರು ನೀಡಿರುವ ಬೆಲೆ ಕಟ್ಟಲಾಗದ ಕೊಡುಗೆ ಜೀವನದ ವಿವಿಧ ಹಂತಗಳಲ್ಲಿ ಸಮಾಜಕ್ಕೆ ಅಗಾಧ ಕೊಡುಗೆ ನೀಡುವ ಬಹುದೊಡ್ಡ ವರ್ಗವನ್ನು ಸೃಷ್ಟಿಸಿದೆ ಎಂದು ಸಿಎಂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಜನರಿಗೆ ಸ್ವಾಮೀಜಿಗಳು ನೀಡಿರುವ ಸೇವೆಯಿಂದ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಎಲ್ಲಾ ರಾಜಕೀಯ ಮತ್ತು ನಾಗರಿಕರು, ಸಂಸ್ಥೆಗಳು ಮತ್ತು ಸಂಘಟಗಳಿಂದ ಭಾರತ ರತ್ನ ನೀಡುವ ಸಲುವಾಗಿ ಹಲವು ಜ್ಞಾಪನೆಗಳನ್ನು ಸ್ವೀಕರಿಸಲಾಗಿದೆ. 2019ರ ಜನವರಿ 21 ರಂದು ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿದ್ದ ಅವರಿಗೆ ಮರಣೋತ್ತರವಾಗಿ ಭಾರತ ಪ್ರಶಸ್ತಿಗೆ ಪರಿಗಣಿಸಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪತ್ರದಲ್ಲಿ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ.