ಬೆಂಗಳೂರು: ಕಳಂಕಿತ ಆರೋಪಗಳಿಂದ ಮುಕ್ತರಾದ ಮೇಲೂ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದೇ ಸತಾಯಿಸುತ್ತಿರುವುದಕ್ಕೆ ಅಸಮಾಧಾನಗೊಂಡಿರುವ ಬಿಜೆಪಿಯ ಹಿರಿಯ ನಾಯಕರಾದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಬಿಜೆಪಿ ವಲಸಿಗರ ಮುಖಂಡ ಮಾಜಿ ಸಚಿವ ರಮೇಶ ಜಾರಕಿಹೊಳಿ ಜೊತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತುಕತೆ ನಡೆಸಿ ಯಾವುದೇ ಕಾರಣಕ್ಕೂ ಬಂಡಾಯ ಏಳದಂತೆ ಮನವೊಲಿಕೆ ಮಡಿದ್ದಾರೆ.
ಬೆಳಗಾವಿ ಅಧಿವೇಶನ ಆರಂಭಗೊಳ್ಳುವ ಮುನ್ನ ತಮ್ಮನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ ಅಸಮಾಧಾನ ಹೊರಹಾಕುವ ಮುನ್ಸೂಚನೆ ನೀಡಿದ್ದ ಇಬ್ಬರು ಮಾಜಿ ಸಚಿವರ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಳಗಾವಿಯಲ್ಲಿ ಬುಧವಾರ ರಾತ್ರಿ ಮಾತುಕತೆ ನಡೆಸಿ ಸಚಿವ ಸಂಪುಟ ವಿಸ್ತರಣೆಗಾಗಿ ತಾವು ನಡೆಸುತ್ತಿರುವ ಕಸರತ್ತಿನ ಬಗ್ಗೆ ಮನದಟ್ಟು ಮಾಡಿಕೊಟ್ಟರು.
ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲು ತಮ್ಮ ಕಡೆಯಿಂದ ಯಾವುದೇ ಅಭ್ಯಂತರವಿಲ್ಲ ಎಂದು ಇಬ್ಬರು ಮುಖಂಡರಿಗೆ ಸ್ಪಷ್ಟಪಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಪುಟ ವಿಸ್ತರಣೆ ಕುರಿತು ಹಲವಾರು ಬಾರಿ ದೆಹಲಿಗೆ ತೆರಳಿ ಹೈಕಮಾಂಡ್ ಬಳಿ ಪ್ರಾಮಾಣಿಕವಾಗಿ ಚರ್ಚೆ ನಡೆಸಿದ ಸಂಗತಿಗಳ ಬಗ್ಗೆ ಮಾಹಿತಿ ನೀಡಿದರು ಎನ್ನಲಾಗಿದೆ.
ಮುಖ್ಯಮಂತ್ರಿಗಳ ಸಾಂತ್ವನದ ಮಾತುಗಳಿಗೆ ಮರುಳಾಗದೇ ಅಸಮಾಧಾನ ಹೊರಹಾಕಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಮ್ಮಿಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳಲು ಹೈಕಮಾಂಡ್ ಸಕಾರಾತ್ಮಕವಾಗಿ ಸ್ಪಂದಿಸಿದೆ. ಹೈಕಮಾಂಡ್ ಬುಲಾವ್ ನೀಡಿದ ತಕ್ಷಣ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡು ಬರುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮುಖ್ಯಮಂತ್ರಿಗಳ ಜೊತೆಗಿನ ಮಾತುಕತೆ ನಂತರ ಮಾಜಿ ಸಚಿವ ಈಶ್ವರಪ್ಪ ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಸಚಿವ ಸಂಪುಟಕ್ಕೆ ತಮ್ಮಿಬ್ಬರನ್ನೂ ಸೇರಿಸಿಕೊಳ್ಳುವ ಬಗ್ಗೆ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಮಾತುಕತೆ... ಬೆಂಗಳೂರಿನತ್ತ ಸಚಿವ ಆಕಾಂಕ್ಷಿಗಳು