ಬೆಂಗಳೂರು: ಮುಂದಿನ ಮೂರು ತಿಂಗಳಿನಲ್ಲಿ ಉಪನಗರ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರೇ ಬಂದು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಿಂದ ರೈಲ್ವೆ ಯೋಜನೆಗಳ ಪರಿಶೀಲನೆಗಾಗಿ ರೂಪಿಸಿರುವ ರೈಲಿನ ಬೋಗಿಯಲ್ಲಿ ಲೋಕೋಪೈಲಟ್ ಪಕ್ಕದ ಆಸನದಲ್ಲಿ ಕುಳಿತು ಯಡಿಯೂರಪ್ಪ ಪ್ರಯಾಣಿಸಿದರು. ರೈಲಿನ ಮೂಲಕವೇ ಯಶವಂತಪುರ-ಚನ್ನಸಂದ್ರ ಹಾಗೂ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ನಂತರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಸಿಎಂ, ಹಿರಿಯ ಅಧಿಕಾರಿಗಳ ಜತೆಯಲ್ಲಿ ಕಾಮಗಾರಿಗಳ ಪರಿಶೀಲನೆ ಮಾಡಿದ್ದೇನೆ. ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಕಾಮಗಾರಿ ಪರಿಶೀಲನೆ ನಡೆಸಿದ್ದೇನೆ. ಎರಡು ಯೋಜನೆಗಳ ತಪಾಸಣೆ ಮುಗಿದಿದೆ. ಉಪನಗರ ಯೋಜನೆಯಿಂದ ಬೆಂಗಳೂರು ನಗರದ ಹೊರವಲಯದ ಉಪನಗರಗಳು ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ಸಾರಿಗೆ ಸಂಪರ್ಕ ಸುಲಭವಾಗಲಿದೆ. ಅಲ್ಲದೇ ಬೆಂಗಳೂರು ಸಂಚಾರ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ. ಅದೇ ರೀತಿ ದ್ವಿಪಥ ಮಾರ್ಗದಿಂದಾಗಿ ಹೆಚ್ಚುವರಿ ರೈಲುಗಳ ಕಾರ್ಯಾಚರಣೆಗೆ ಅನುಕೂಲವಾಗಲಿದೆ ಎಂದರು.
ಬೆಂಗಳೂರು ಉಪನಗರ ರೈಲು ಯೋಜನೆಯನ್ನು 15,500 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸುತ್ತಿದ್ದು, ಯೋಜನೆ ವೆಚ್ಚವನ್ನು ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಅನುದಾನ ಹಾಗೂ ಬಾಹ್ಯ ಸಂಪನ್ಮೂಲದ ಅನುದಾನ ಗಳಿಂದ 20:20:60ರ ಅನುಪಾತದಲ್ಲಿ ಭರಿಸಲಾಗುತ್ತದೆ.
ಈಗಾಗಲೇ 2020-21 ರಲ್ಲಿ 400 ಕೋಟಿ ರೂ. ಯೋಜನೆಯನ್ನು ರಾಜ್ಯ ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಒಟ್ಟು 148 ಕಿಲೋ ಮೀಟರ್ ಉದ್ದದ ಯೋಜನೆ 4 ಕಾರಿಡಾರ್ಗಳನ್ನು ಹೊಂದಿದೆ. ಬೈಯ್ಯಪ್ಪನಹಳ್ಳಿ ಚಿಕ್ಕಬಾಣಾವರ, ರಾಜಾನುಕುಂಟೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಯಶವಂತಪುರ, ಬೈಯ್ಯಪ್ಪನಹಳ್ಳಿ, ಹೊಸೂರು, ಚನ್ನಸಂದ್ರ ಮಾರ್ಗಗಳು ಏಕಪಥವಾಗಿದ್ದು ಹೆಚ್ಚುವರಿ ರೈಲು ಸಂಚಾರಕ್ಕೆ ತೊಡಕಾಗಿದೆ. ಇಲ್ಲಿ ದ್ವಿಪಥ ರಚನೆಗಾಗಿ 60 ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಯೋಜನೆಗಳಿಗೆ ನಿಗದಿತ ಅನುದಾನ ನೀಡುತ್ತಿದ್ದು, ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ್ದೇನೆ. ಉಪನಗರ ರೈಲ್ವೆ ಯೋಜನೆ ಶಂಕುಸ್ಥಾಪನೆ ಇನ್ನು ಮೂರು ತಿಂಗಳಲ್ಲಿ ಮಾಡಲಿದ್ದೇವೆ. ಪ್ರಧಾನಿ ಮೋದಿ ಅವರ ಕನಸಿನ ಕಾರ್ಯಕ್ರಮ ಇದಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿಗಳನ್ನು ಆರಂಭಿಸಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರೇ ಶಂಕುಸ್ಥಾಪನೆ ಮಾಡಬೇಕು, ಅವರೇ ಬಂದು ಶಂಕುಸ್ಥಾಪನೆ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
ಕೇಂದ್ರ-ರಾಜ್ಯದಲ್ಲಿ ಒಂದೇ ಪಕ್ಷ, ಏನು ಮಾಡುತ್ತೀರಿ ಏನ್ನುವವರಿಗೆ ಟಾಂಗ್:
ಯೋಜನೆಗಳಿಗೆ 7,400 ಕೋಟಿ ಸಾಲವನ್ನು ಹೆಚ್ಚುವರಿಯಾಗಿ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಯೋಜನೆ ಆದಷ್ಟು ಬೇಗ ಪೂರ್ಣವಾಗಬೇಕು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದೇ ಪಕ್ಷ ಇದ್ದರೂ ಸಾಧನೆ ಏನ್ ಮಾಡುತ್ತೀರಿ ಎಂದು ಕೇಳುತ್ತಿರುವ ಕಾಂಗ್ರೆಸ್ನವರಿಗೆ ಹೇಳುತ್ತೇನೆ. ಈಗ ಬಂದು ನೋಡಿ, ಇನ್ನು ಮೂರು ತಿಂಗಳಲ್ಲಿ ಉಪನಗರ ರೈಲು ಯೋಜನೆ ಸ್ಥಾಪನೆಯಾಗಲಿದೆ. ದ್ವಿಪಥ ಯೋಜನೆಗಳು ನಡೆಯಲಿದೆ. ಇದನ್ನು ನೋಡಿದ ನಂತರವಾದರೂ ಟೀಕೆ-ಟಿಪ್ಪಣಿ ಮಾಡುವುದನ್ನು ನಿಲ್ಲಿಸಿ ಎಂದು ಟಾಂಗ್ ನೀಡಿದರು.
ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸುವುದಾಗಿ ಸಿಎಂ ಖಡಕ್ ಮಾತು
ಎರಡು ದಿನಕ್ಕೊಮ್ಮೆ ರೈಲಿನ ಮೂಲಕ ದೆಹಲಿ ಮಾರುಕಟ್ಟೆಗೆ ಎಳನೀರು, ಟೊಮೆಟೊ ಕಳುಹಿಸಲಾಗುತ್ತದೆ. ಇದಕ್ಕಾಗಿ 7 ಲಕ್ಷ ರೂ. ಸಬ್ಸಿಡಿಯನ್ನು ಪ್ರತಿ ರೈಲಿಗೆ ನೀಡಲಾಗುತ್ತದೆ. ನಾಳೆ ಮಧ್ಯಾಹ್ನ ಅದನ್ನು ಪರಿಶೀಲಿಸುತ್ತೇನೆ. ಯಾವ ರೀತಿ ಹಣ್ಣು ಸಾಗಾಣಿಕೆ ಮಾಡಲಾಗುತ್ತಿದೆ ಎಂದು ಪರಿಶೀಲಿಸುತ್ತೇನೆ. ರೈತರ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಗಬೇಕು ಎನ್ನುವ ಕಾರಣಕ್ಕೆ, ಪ್ರಧಾನಿ ಮೋದಿ ಆಸಕ್ತಿಯಿಂದಾಗಿ ದೆಹಲಿ ಮಾರುಕಟ್ಟೆಗೆ ಹಣ್ಣು, ಎಳ ನೀರು ಮಾರಾಟ ಮಾಡುವ ಪ್ರಕ್ರಿಯೆ ನಡೆಸಲಾಗುತ್ತದೆ ಎಂದರು.