ಬೆಂಗಳೂರು: ಮೊದಲ ಜಿಮ್ ಹೊರತುಪಡಿಸಿ ಈವರೆಗೂ ನಡೆದಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಆದ ಒಡಂಬಡಿಕೆಗಳ ಅನುಷ್ಠಾನದ ಪ್ರಮಾಣ ಕೇವಲ ಶೇ.15 ರಷ್ಟು ಮಾತ್ರ ಎನ್ನುವ ಮಾಹಿತಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಹಿರಂಗಪಡಿಸಿದ್ದು, ಈ ಬಾರಿ ಅದು ಪುನರಾವರ್ತನೆ ಆಗಬಾರದು ಮುಂದಿನ ಮೂರು ತಿಂಗಳ ಒಳಗೆ ಒಡಂಬಡಿಕೆ ಅನುಷ್ಠಾನ ಕುರಿತು ವರದಿ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, 9.8 ಲಕ್ಷ ಕೋಟಿ ರೂ.ಗಳ ಒಡಂಬಡಿಕೆಯಾಗಿದೆ. ಉದ್ಯಮಿಗಳು ಹೂಡಿಕೆ ಸಮಾವೇಶಕ್ಕೆ ಬಂದು ಸರಿಯಾದ ಸಮಯಕ್ಕೆ ಸರಿಯಾದ ವಲಯದಲ್ಲಿ ಹೂಡಿಕೆ ಮಾಡಿದ್ದಾರೆ. ಎಲ್ಲಾ ಕ್ಲಿಯರೆನ್ಸ್ ಸರ್ಕಾರದಿಂದ ಕೊಡಲಾಗುತ್ತದೆ. ನಮ್ಮ ಸರ್ಕಾರ ಜಿನ್ಯೂನ್ ಹೂಡಿಕೆದಾರರಿಗೆ ಮಾತ್ರ ಅವಕಾಶ ನೀಡಲಿದೆ, ಕಮಿಡೆಟ್ ಹೂಡಿಕೆದಾರರೊಂದಿಗೆ ಮಾತ್ರ ಒಡಂಬಡಿಕೆ ಮಾಡಿಕೊಂಡಿದೆ.
ಹಿಂದಿನ ಹೂಡಿಕೆ ಸಮಾವೇಶಗಳಿಗಿಂತ ನಮ್ಮ ಸರ್ಕಾರ ಒಡಂಬಡಿಕೆಯ ಅನುಷ್ಠಾನದಲ್ಲಿ ಮುಂದಿದೆ. ಮೊದಲ ಜಿಮ್ ಸಮಾವೇಶ 2000 ನೇ ಇಸ್ವಿಯಲ್ಲಿ ನಡೆಯಿತು, ಈ ಸಮಾವೇಶದಲ್ಲಿ 27,057 ಕೋಟಿ ಒಪ್ಪಂದ ಆಗಿತ್ತು ಆದರೆ, 12 ಸಾವಿರ ಕೋಟಿ ಮಾತ್ರ ಹೂಡಿಕೆ ಅನುಷ್ಠಾನ ಬಂದಿದೆ. ಶೇಕಡಾ ಶೇ 44 ರಷ್ಟು ಅನುಷ್ಠಾನ ಆಗಿತ್ತು, 2010 ರಲ್ಲಿ 3,94,768 ಕೋಟಿ ಒಡಂಬಡಿಕೆಯಾಗಿತ್ತು. ಆದರೆ, ಕೇವಲ ಶೇ. 14 ಮಾತ್ರ ಅನುಷ್ಠಾನಕ್ಕೆ ಬಂದಿದೆ, 2012 ರಲ್ಲಿ 6,77,168 ಕೋಟಿ ಒಡಂಬಡಿಕೆಯಾಗಿತ್ತು, ಕೇವಲ ಶೇ 8 ಮಾತ್ರ ಅನುಷ್ಠಾನಕ್ಕೆ ಬಂದಿದೆ, 2016 ರಲ್ಲಿ 3,05,000 ಕೋಟಿ ಒಡಂಬಡಿಕೆಯಾಗಿತ್ತು, ಆದರೆ ಶೇ 15 ಮಾತ್ರ ಅನುಷ್ಠಾನಕ್ಕೆ ಬಂದಿದೆ ಈ ರೀತಿ ಪುನಾರವರ್ತನೆಯಾಗಬಾರದು, ರಾಜ್ಯ ಸರ್ಕಾರ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಲ್ಲ. ಪಾರದರ್ಶಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬಹಿರಂಗಗೊಳಿಸಿದ್ದೇನೆ.
ಈ ಬಾರಿ 9.08 ಲಕ್ಷ ಕೋಟಿ ಒಡಂಬಡಿಕೆಯಾಗಿದೆ. ಅದರಲ್ಲಿ 2.83 ಲಕ್ಷ ಕೋಟಿ ಹೂಡಿಕೆಯ ಒಡಂಬಡಿಕೆಗೆ ಅನುಮೋದನೆ ಸಿಕ್ಕಿದೆ. ಶೇ.19ಗೆ ಈಗಾಗಲೇ ಒಪ್ಪಿಗೆ ಸಿಕ್ಕಿದೆ. ಮುಂದಿನ ಮೂರು ತಿಂಗಳಿನಲ್ಲೇ ಅನುಷ್ಠಾನಕ್ಕೆ ಸೂಚನೆ ನೀಡಲಿದ್ದು, ಅನುಷ್ಠಾನ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಿದ್ದೇನೆ ಎಂದರು.
ಜಿಮ್, ಇನ್ ವೆಸ್ಟ್ ಕರ್ನಾಟಕ ಯಾಕೆ ಮುಖ್ಯ: ಹಿಂದಿನ ಸಮಾವೇಶಗಳಿಗಿಂತ ಈ ಸಮಾವೇಶ ಬಹಳ ಪ್ರಮುಖವಾಗಿದೆ. ಇಡೀ ಜಗತ್ತು ಆರ್ಥಿಕ ಹಿಂಜರಿತಕ್ಕೆ ಸಿಲುಕಿದೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿದೆ. ಆರ್ಥಿಕ ಚೈನ್ ಆಗಿರುವ ಜಗತ್ತಿನ ದೊಡ್ಡ ದೇಶಗಳಿಗೂ ಬಿಸಿ ತಟ್ಟಿದೆ. ಆದರೆ, ಕರ್ನಾಟಕ ಧೈರ್ಯದಿಂದ ಹೂಡಿಕೆದಾರರ ಸಮಾವೇಶ ಮಾಡಿದೆ. ಇಡೀ ಜಗತ್ತು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಯತ್ನಿಸುತ್ತಿದೆ. ಆದರೆ, ಕರ್ನಾಟಕ ಜಿಮ್ ಸಮಾವೇಶದ ಸಾಹಸ ಮಾಡಿದೆ, ಇದರ ಫಲಿತಾಂಶ ಒಡಂಬಡಿಕೆಯಲ್ಲಿ ಸ್ಪಷ್ಟವಾಗಿದೆ. ಕರ್ನಾಟಕ ಸರ್ಕಾರದ ಮೇಲೆ ನಂಬಿಕೆ ಇರಿಸಿ ಹೂಡಿಕೆ ಮಾಡಿದ್ದಾರೆ ಎಂದರು.
ನಮ್ಮ ಶಕ್ತಿ ನಮ್ಮ ಜನ, ಅತಿ ಹೆಚ್ಚಿನ ಕೌಶಲ್ಯವನ್ನು ಹೊಂದಿದ ಮಾನವ ಸಂಪನ್ಮೂಲ ಇದೆ, ನಮ್ಮ ನೀತಿಗಳೇ ನಮ್ಮ ಶಕ್ತಿ, ಜಿಮ್ ಯಶಸ್ಸಿನ ಹಿಂದೆ ನಮ್ಮ ತೆರಿಗೆ ನಿಯಮ, ಹೂಡಿಕೆ ನೀತಿ ಸರಳೀಕರಣವಿದೆ. ಕರ್ನಾಟಕ ಏನು ಆಲೋಚಿಸುತ್ತದೆಯೋ ದೇಶ ನಾಳೆ ಅದನ್ನು ಆಲೋಚಿಸುತ್ತದೆ. ಬೆಂಗಳೂರಿಗೆ ಪ್ರತಿದಿನ 10 ಸಾವಿರ ಇಂಜಿನಿಯರ್ಗಳು ಬರ್ತಾರೆ.
ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ನಮ್ಮನೀತಿ, ಚಿಂತನೆಗಳ ಬದಲಾವಣೆಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ. ಹೊಸ ಸವಾಲುಗಳನ್ನು ಎದುರಿಸುತ್ತಿದ್ದೇವೆ, ಈ ರೀತಿ ನೀತಿ ಮಾಡಿರುವ ಮತ್ತೊಂದು ರಾಜ್ಯ ಇಲ್ಲ ಎಂದರು.
ಯಾವುದೇ ಮ್ಯಾಜಿಕ್ ಇರಲ್ಲ: ಆರ್ಥಿಕತೆಯಲ್ಲಿ ಯಾವುದೇ ಮ್ಯಾಜಿಕ್ ಇರಲ್ಲ, ಕಠಿಣ ಪರಿಶ್ರಮ, ನೀತಿ ನಿಯಮಗಳಿಂದ ಮಾತ್ರ ಸಾಧ್ಯ. ನಮ್ಮ ಅಪ್ರೋಚ್, ವಿಷನ್ ಬದಲಾಯಿಸಿಕೊಂಡಿದ್ದೇವೆ, ಇಂಧನ ವಲಯದಲ್ಲಿ ಹೊಸ ಸವಾಲು ಇದೆ, 63 ಪರ್ಸೆಂಟ್ ಇಂಧನ ನವೀಕರಿಸಬಹುದಾದ ಇಂಧನ ಮೂಲಗಳಿಂದ ಬರುತ್ತಿದೆ, ನಮ್ಮ ಸ್ಟ್ರಾಟಜಿ ಬದಲಾಯಿಸಿಕೊಳ್ಳಬೇಕಿದೆ, ನವೀಕರಿಸಬಹುದಾದ ಇಂಧನ ಉತ್ಪಾದನೆಯಲ್ಲಿ ನಾವು ಗಲ್ಫ್ ಗೆ ಸ್ಪರ್ಧೆ ಮಾಡಬೇಕು ಇದು ನಮ್ಮ ವಿಜನ್, ಹೈಡ್ರೋಜನ್ ವಿದ್ಯುತ್ ಉತ್ಪಾದನೆ ನಾವೇ ಮೊದಲು ಮಾಡಬೇಕು, ಫೆಬ್ರವರಿ ಮಾರ್ಚ್ ವೇಳೆಗೆ ನಾವು ಉತ್ಪಾದನೆ ಮಾಡಬೇಕು ಎನ್ನುವುದು ನಮ್ಮ ಗುರಿ ಎಂದರು.
50 ಸಾವಿರ ಎಕರೆ ಭೂ ಬ್ಯಾಂಕ್ ಇದೆ, ಶಿವಮೊಗ್ಗ, ವಿಜಯಪುರ ವಿಮಾನ ನಿಲ್ದಾಣ ಉದ್ಘಾಟನೆ ಆಗಲಿದೆ, ರಸ್ತೆ ನಿರ್ಮಾಣವಾಗಿದೆ, ಅತ್ಯುತ್ತಮ ಮೂಲಸೌಕರ್ಯ ಸಾಮರ್ಥ್ಯವಿದೆ. ಬೆಂಗಳೂರು ಈವರೆಗೂ ಐಟಿ ಹಬ್ ಆಗಿತ್ತು ಅತಿ ಶೀಘ್ರದಲ್ಲೇ ಫೈನಾಶ್ಷಿಯಲ್ ಹಬ್ ಆಗಲಿದೆ. ಈ ಬಾರಿಯ ಹೂಡಿಕೆದಾರರ ಸಮಾವೇಶ ನಮ್ಮ ಮುಂದಿನ ಆರ್ಥಿಕ ಬೆಳವಣಿಗೆಗೆ ಪೂರಕವಾಗಲಿದೆ. ತೀವ್ರತರದ ಆರ್ಥಿಕ ಸುಧಾರಣೆಗೆ ದಾರಿಯಾಗಲಿದೆ ಎಂದರು.
ಇದು ಮಧ್ಯಂತರ ಅವದಿ ಇನ್ನು ಮೂರು ತಿಂಗಳು ನಾವು ಮಲಗಲ್ಲ ಮೂರು ತಿಂಗಳಿನಲ್ಲಿ ನಾವು 140 ಕಿಲೋ ಮೀಟರ್ ವೇಗದಲ್ಲಿ ಕೆಲಸ ಮಾಡಬೇಕು ಆಗ ಮಾತ್ರ ಈ ಸಮಾವೇಶಕ್ಕೆ ಅರ್ಥ ಬರಲಿದೆ, ಡೋಂಟ್ ವರಿ ಗಾಯ್ಸ್.... ನಿಮ್ಮ ಒಡಂಬಡಿಕೆಯನ್ನ ಕಾರ್ಯರೂಪಕ್ಕೆ ತರಲು ಎಲ್ಲ ಸಹಕಾರ ನೀಡುತ್ತೇವೆ ಎಂದರು.
ಕನ್ನಡದ ಪಾಟೀಲ್ರು, ಕುಲಕರ್ಣಿಗಳು, ಗೌಡ್ರು, ಹೂಡಿಕೆ ಮಾಡಬೇಕು: ಕನ್ನಡದವರು ಹೂಡಿಕೆ ಮಾಡಿ ಜಗತ್ತಿಗೆ ಉದ್ಯಮಿಯಾದರೆ ಬಹಳ ಸಂತೋಷ, ಆ ಸಾಮರ್ಥ್ಯ ಕನ್ನಡಿಗರಿಗೆ ಬರಬೇಕು, ಪಾಟೀಲ್ರು, ಕುಲಕರ್ಣಿ, ಗೌಡ್ರು ಎಲ್ಲ ಹೂಡಿಕೆಗೆ ಬರಬೇಕು. ಎಲ್ಲ ವರ್ಗದ ಜನರು ಉದ್ಯೋಗಪತಿಗಳಾಗಬೇಕು ಎನ್ನುವುದು ನಮ್ಮ ಆಸೆ. ಇತ್ತೀಚೆಗೆ ದಲಿತ ಉದ್ಯಮಿ ಭೇಟಿಯಾಗಿದ್ದೆ, ಅವರು ಅತ್ಯಂತ ಪ್ರಮುಖ ವಲಯದಲ್ಲಿ ಮುಂದೆ ಬರಲು ನೋಡುತ್ತಿರುವುದು ಕಂಡ ಸಂತಸವಾಯಿತು. ಬುದ್ದಿವಂತಿಕೆ, ಪರಿಶ್ರಮ ಯಾರೋಬ್ಬರ ಸ್ವತ್ತಲ್ಲ, ಖಂಡಿತ ಅವರಿಗೆ ಸಫಲತೆ ಸಿಗಲಿದೆ ಎಂದರು.
ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೇವಲ ಹೂಡಿಕೆ ಮಾತ್ರವಲ್ಲ ಸ್ಪೂರ್ತಿಯನ್ನೂ ಪಡೆಯಬೇಕು, ಉದ್ಯಮಿಗಳ ಕೌಶಲ್ಯದಿಂದ ಸ್ಪೂರ್ತಿ ಪಡೆದು ಮುಂದಿನ ಜಿಮ್ನಲ್ಲಿ ಸ್ಪೂರ್ತಿ ಪಡೆದವರು ಸಹಿ ಹಾಕಬೇಕು ಅದು ನಮ್ಮ ಉದ್ದೇಶ, ಹೂಡಿಕೆ ಮತ್ತು ಸ್ಪೂರ್ತಿ ಎರಡೂ ಈ ಸಮಾವೇಶದಲ್ಲಿ ಆಗಿದೆ. ನಮ್ಮೆಲ್ಲರ ನಿರೀಕ್ಷೆ ಮೀರಿ ಹೂಡಿಕೆ ಹರಿದುಬಂದಿದೆ ಇದರ ಹಿಂದೆ ನಮ್ಮ ಅಧಿಕಾರಿಗಳು ದೊಡ್ಡ ಸಹಾಯ ಮಾಡಿದ್ದಾರೆ. ದೊಡ್ಡ ಪ್ರಮಾಣದ ಪರಿಶ್ರಮ ಹಾಕಿದ್ದಾರೆ ಎಂದರು.
ಸಿಎಂ ಗರಂ: ಸಿಎಂ ಬಸವರಾಜ ಬೊಮ್ಮಾಯಿ ಭಾಷಣದ ವೇಳೆ ಮಾತುಕತೆಯಲ್ಲಿ ತೊಡಗಿದ್ದ ಮಹಿಳೆಗೆ ಸುಮ್ಮನಿರುವಂತೆ ಸೂಚನೆ ನೀಡಿದರು. ಬಹಳ ಸಮಯದಿಂದ ನೋಡುತ್ತಿದ್ದೇನೆ, ನಿಮ್ಮ ಮಾತುಕತೆ ನನಗೆ ತೊಂದರೆ ಕೊಡುತ್ತಿದೆ, ಹೊರಗಡೆ ಒಳ್ಳೆಯ ಲಾಂಚ್ ಇದೆ ನೀವು ಹೊರ ಹೋಗಬಹುದು ಎಂದರು. ಉದ್ಘಾಟನಾ ಸಮಾರಂಭದಲ್ಲಿ ಮುರುಗೇಶ್ ನಿರಾಣಿ ವಿರುದ್ಧ ಇದೇ ರೀತಿ ಗರಂ ಆಗಿದ್ದ ಸಿಎಂ ಸಮಾರೋಪ ಸಮಾರಂಭದಲ್ಲೂ ಮಹಿಳೆಯೊಬ್ಬರ ವಿರುದ್ಧ ಗರಂ ಆದರು.
ಇದನ್ನೂ ಓದಿ: 10 ಲಕ್ಷ ಕೋಟಿ ಬಂಡವಾಳದಲ್ಲಿ ಬೆಂಗಳೂರು ಹೊರಗಡೆಯೇ ಶೇ.70 ರಷ್ಟು ಹೂಡಿಕೆ: ಮುರುಗೇಶ್ ನಿರಾಣಿ