ಬೆಂಗಳೂರು: ಎನ್‌ಡಿಆರ್‌ಎಫ್ ನಿಧಿಯಿಂದ ಶೀಘ್ರ ಬರ ಪರಿಹಾರ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಮಳೆ ಕೊರತೆಯಿಂದ ರಾಜ್ಯದಲ್ಲಿ ಹಿಂದೆಂದೂ ಕಾಣದ ಭೀಕರ ಬರ ಬಂದಿದ್ದು, 236 ತಾಲೂಕುಗಳ ಪೈಕಿ 223 ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗಿದೆ. ಇದರಲ್ಲಿ 196 ತಾಲೂಕುಗಳು ತೀವ್ರ ಬರಪೀಡಿತ ಎಂದು ಘೋಷಿಸಲಾಗಿದೆ. ಎನ್‌ಡಿಆರ್‌ಎಫ್ ಅಡಿ ಬರ ಪರಿಹಾರ ಕೋರಿ ಸೆ.22 ರಂದು ಕೇಂದ್ರ ಸರ್ಕಾರಕ್ಕೆ ಮೆಮೊರಾಡಂ ಸಲ್ಲಿಸಲಾಗಿತ್ತು. 10 ಸದಸ್ಯರ ಕೇಂದ್ರ ಬರ ಅಧ್ಯಯನ ತಂಡ ಬಂದು ಪರಿಶೀಲಿಸಿ ಹೋಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 48 ಲಕ್ಷ ಹೆಕ್ಟೇರ್ ವ್ಯಾಪ್ತಿಯಲ್ಲಿ ಅಂದಾಜು 35,162.05 ಕೋಟಿ ರೂ. ಬೆಳೆ ನಷ್ಟವಾಗಿದೆ. ಎನ್‌ಡಿಆರ್‌ಎಫ್ ಅಡಿ ರಾಜ್ಯ ಸರ್ಕಾರ 18,171.44 ಕೋಟಿ ರೂ. ಪರಿಹಾರ ಕೋರಿದೆ. ನಮ್ಮ ಕಂದಾಯ ಸಚಿವ ಕೃಷ್ಣ ಭೈರೇಗೌಡರು ತಮ್ಮ ಭೇಟಿಗೆ ಹಲವು ಬಾರಿ ಸಮಯಾವಕಾಶ ಕೋರಿದ್ದಾರೆ. ಆದರೆ ಭೇಟಿ ಸಾಧ್ಯವಾಗಿಲ್ಲ. ಕಂದಾಯ ಸಚಿವರು ಗೃಹ ಇಲಾಖೆಯ ಕಾರ್ಯದರ್ಶಿರನ್ನು ಭೇಟಿ ಮಾಡಿ ಬರದ ಬಗ್ಗೆ ವಿವರಿಸಿದ್ದಾರೆ ಎಂದು ತಿಳಿಸಿದ್ದಾರೆ.
ಅದೇ ರೀತಿ ಇನ್‌ಪುಟ್ ಸಬ್ಸಿಡಿ ನೀಡುವುದಕ್ಕೆ 2015ರ ಕೃಷಿ ಗಣತಿ ಆಧರಿತ ದತ್ತಾಂಶದ ಬದಲು ರಾಜ್ಯ ಸರ್ಕಾರದ ಫ್ರೂಟ್ಸ್ ತಂತ್ರಾಂಶ ಆಧರಿತ ದತ್ತಾಂಶದ ಪ್ರಕಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಫ್ರೂಟ್ಸ್ ತಂತ್ರಾಂಶದ ಪ್ರಕಾರ ಈ 31 ಜಿಲ್ಲೆಗಳಲ್ಲಿ ಸುಮಾರು 52.73 ಲಕ್ಷ ರೈತರಿದ್ದು, ಅವರು ಎರಡು ಹೆಕ್ಟೇರ್ಗಿಂತ ಕಡಿಮೆ ಭೂಮಿ ಹೊಂದಿದ್ದಾರೆ. ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವುದಕ್ಕಾಗಿ ಕೇಂದ್ರ ಸರ್ಕಾರ ತಕ್ಷಣ ನೆರವಿಗೆ ಧಾವಿಸಬೇಕಿದೆ. ಈ ಹಿನ್ನೆಲೆಯಲ್ಲಿ ಬರ ನಿರ್ವಹಣೆಗಾಗಿ ಕೇಂದ್ರದ ಕಾರ್ಯಕಾರಿಣಿ ಸಮಿತಿಗೆ ತಕ್ಷಣ ವರದಿ ಸಲ್ಲಿಸುವಂತೆ ತಾವು ನಿರ್ದೇಶನ ನೀಡಬೇಕು. ಎನ್‌ಡಿಆರ್‌ಎಫ್ ನಿಧಿಯಿಂದ ಶೀಘ್ರ ಅನುದಾನ ಬಿಡುಗಡೆ ಮಾಡಿದರೆ, ರೈತರಿಗೆ ಇನ್‌ಪುಟ್ ಸಬ್ಸಿಡಿ ವಿತರಣೆ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂದು ಮನವಿ ಮಾಡಿದ್ದಾರೆ.
ರಾಜ್ಯದ ನೀರಾವರಿ ಯೋಜನೆಗಳಿಗೆ ಹಣ ಬಿಡುಗಡೆಗೆ ಒತ್ತಾಯ: ರಾಜ್ಯದಲ್ಲಿ ಪ್ರಗತಿಯಲ್ಲಿರುವ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡಬೇಕಾಗಿರುವ ತನ್ನ ಪಾಲಿನ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ ಬಿ ಜಯಚಂದ್ರ ಅವರು ಕೇಂದ್ರ ಜಲ ಶಕ್ತಿ ಕಾರ್ಯದರ್ಶಿ ದೆಬಾಷಿಶ್ ಮುಖರ್ಜಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಮಾಡಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಯನ್ನು ಕೇಂದ್ರ ಸರ್ಕಾರ ಕಳೆದ ಬಜೆಟ್ನಲ್ಲಿ ರಾಷ್ಟ್ರೀಯ ಯೋಜನೆ ಎಂದು ಘೋಷಣೆ ಮಾಡಿದ್ದು, ಈ ಯೋಜನೆಗಾಗಿ 5,300 ಕೋಟಿ ಹಣ ನೀಡುವುದಾಗಿ ಸಹ ಭರವಸೆ ನೀಡಿತ್ತು. ಇದೀಗ ಈ ಯೋಜನೆಗೆ ಸಂಬಂಧಿಸಿದ ಕಡತ ಪ್ರಧಾನಮಂತ್ರಿ ಅವರ ಕಾರ್ಯಾಲಯದಲ್ಲಿದೆ. ಮುಂದೆ ನಡೆಯಲಿರುವ ಕೇಂದ್ರ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ಈ ಕಡತವನ್ನು ಮಂಡಿಸಿ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿರುವುದನ್ನು ಅನುಮೋದಿಸುವುದಾಗಿ ಕೇಂದ್ರ ಜಲ ಶಕ್ತಿ ಕಾರ್ಯದರ್ಶಿ ದೆಬಾಷಿಶ್ ಮುಖರ್ಜಿ ಅವರು ಜಯಚಂದ್ರ ಅವರಿಗೆ ಮಾತುಕತೆ ವೇಳೆ ತಿಳಿಸಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಭಾಗಗಳಲ್ಲಿ ಭೂಸ್ವಾಧೀನ ಮಾಡಿಕೊಳ್ಳಬೇಕಾಗಿದೆ. ಹೀಗಾಗಿ ಈ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಿಸಿದರೆ, ನಿಗದಿತ ಸಮಯದಲ್ಲಿ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಬಹುದು ಎಂದು ಜಯಚಂದ್ರ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಮೇಕೆದಾಟು ಯೋಜನೆ ಅನುಮೋದನೆಗೆ ಮನವಿ: ಇದೇ ವೇಳೆ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ಮೇಕೆದಾಟು ಯೋಜನೆಗೆ ಕೇಂದ್ರ ಪರಿಸರ ಇಲಾಖೆ, ಜಲ ಶಕ್ತಿ ಇಲಾಖೆ ಸೇರಿದಂತೆ ವಿವಿಧ ಪ್ರಾಧಿಕಾರಗಳಿಂದ ಅನುಮತಿ ಕೊಡಿಸಿ, ಮೇಕೆದಾಟು ಯೋಜನೆ ಕಾಮಗಾರಿ ಆರಂಭಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬೇಕು ಎಂದು ಕೇಂದ್ರ ಜಲ ಶಕ್ತಿ ಕಾರ್ಯದರ್ಶಿಯವರಿಗೆ ಮನವಿ ಮಾಡಿದ್ದಾರೆ.
ಮೇಕೆದಾಟು ಸಮತೋಲಿತ ಜಲಾಶಯ ನಿರ್ಮಾಣ ಮಾಡುವುದರಿಂದ ಬೆಂಗಳೂರು ಹಾಗೂ ಸುತ್ತಮುತ್ತಲ ಜಿಲ್ಲೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ, ಬರಗಾಲದ ಸಮಯದಲ್ಲಿ ತಮಿಳುನಾಡಿಗೆ ಸಹ ನೀರು ಬಿಡಲು ಅನುಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಯತ್ನಾಳ್, ಸೋಮಣ್ಣ ಸೇರಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತೇನೆ: ಬಿ ವೈ ವಿಜಯೇಂದ್ರ