ಬೆಂಗಳೂರು: ಮುಂಗಾರು ಪೂರ್ವ ಮಳೆ ಅವಾಂತರಕ್ಕೆ ರಾಜ್ಯಾದ್ಯಂತ 52 ಮಂದಿ ಸಾವನ್ನಪ್ಪಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು. ಪ್ರಕೃತಿ ವಿಕೋಪ ಸಂಬಂಧ ಮುಂಜಾಗ್ರತಾ ಕ್ರಮ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿ, ಸಿಇಒಗಳ ಜೊತೆ ವಿಡಿಯೋ ಸಂವಾದ ಸಭೆ ನಡೆಸಿ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಏಪ್ರಿಲ್ಗೆ ಪ್ರಿ ಮಾನ್ಸೂನ್ ಮಳೆ ಶುರುವಾಗುತ್ತೆ. ಈ ಬಾರಿ ವಾಡಿಕೆಗಿಂತ ಶೇ.10 ರಷ್ಟು ಹೆಚ್ಚು ಮಳೆಯಾಗಿದೆ. ಈವರೆಗೆ 52 ಜನ ಸತ್ತಿದ್ದಾರೆ. 331 ಜಾನುವಾರುಗಳಿಗೆ ಜೀವಹಾನಿಯಾಗಿದೆ. ಸುಮಾರು 20,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. 814 ಮನೆ ಹಾನಿಗೊಳಗಾಗಿವೆ. ಪ್ರಾಣ ಹಾನಿ ಹಾಗೂ ಮನೆ ಹಾನಿಯಾದವರಿಗೆ ಕೂಡಲೇ ಪರಿಹಾರ ಕೊಡಲು ಸೂಚನೆ ನೀಡಲಾಗಿದೆ ಎಂದರು.
ಮನೆಗಳಿಗೆ ಆದ ನಷ್ಟದ ಬಗ್ಗೆ ಮಾಹಿತಿ ನೀಡಲು ಸೂಚನೆ ನೀಡಿದ್ದೇನೆ. ಹೊಸ ಸರ್ಕಾರ ಬಂದ ಬಳಿಕ ಜನರ ನಿರೀಕ್ಷೆ ಹೆಚ್ಚಿರುತ್ತದೆ. ಅದಕ್ಕೆ ತಕ್ಕ ಕೆಲಸ ಮಾಡಬೇಕು. ಹೀಗಾಗಿ ಅಧಿಕಾರಿಗಳು ಚುರುಕು ಆಗಬೇಕು. ಜನರಿಗೆ ಸರ್ಕಾರ ಬದಲಾವಣೆ ತರುತ್ತಿದೆ ಎಂದು ಗೊತ್ತಾಗಬೇಕು. ಎಲ್ಲರಿಗೂ ಕೂಡಲೇ ಪರಿಹಾರ ಕೊಡಬೇಕಿದೆ. ಕೆಲವರಿಗೆ ಕೊಡಲಾಗಿದೆ, ಕೊಡದೆ ಇದ್ದವರಿಗೆ ಕೊಡುತ್ತೇವೆ. ಪರಿಹಾರ ಕೂಡಲೇ ಕೊಡಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದರು.
ಜೂನ್ 9 ರಿಂದ ಮುಂಗಾರು ಮಳೆ ಶುರುವಾಗುತ್ತದೆ. ಪೂರ್ವ ಮುಂಗಾರಿನಲ್ಲಿ 2 ಲಕ್ಷ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. ಮಳೆ ಹಾನಿ ಪರಿಹಾರ ಕ್ರಮಗಳಿಗೆ ಅಗತ್ಯ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಖಾತೆಯಲ್ಲಿ 540 ಕೋಟಿ ಇದೆ. ವಸ್ತುಸ್ಥಿತಿ ಆಧಾರದ ಮೇಲೆ ಅನುದಾನ ನೀಡಲು ಸೂಚನೆ ನೀಡಲಾಗಿದೆ. 333 ಕೋಟಿ ವಿಪತ್ತು ಪರಿಹಾರ ನಿಧಿಯಲ್ಲಿ ಇದೆ. ಅಗತ್ಯ ಬಿದ್ದರೆ ಹಣ ನೀಡುತ್ತೇವೆ ಎಂದಿದ್ದೇವೆ ಎಂದರು.
ಇದನ್ನೂ ಓದಿ: ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು: ಕೊಚ್ಚಿ ಹೋದ ಚಿನ್ನಾಭರಣ!
ತೊಗರಿ ಬೆಳೆಗೆ ನೆಟ್ಟೆ ರೋಗಕ್ಕೆ ಹಿಂದಿನ ಸರ್ಕಾರ ಪರಿಹಾರ ಕೊಟ್ಟಿಲ್ಲ. ಕೂಡಲೇ ಪರಿಹಾರ ಕೊಡಬೇಕು ಎಂದು ಸೂಚನೆ ನೀಡಿದ್ದೇವೆ. ಗೊಬ್ಬರ, ಕೀಟನಾಶಕಗಳು ಬೇಡಿಕೆಗಿಂತ ಹೆಚ್ಚು ಇರಬೇಕು, ಕೊರತೆ ಆಗಬಾರದು. ಬಿತ್ತನೆ ಬೀಜ, ಗೊಬ್ಬರಕ್ಕೆ ರೈತರು ಅಲೆದಾಡಬಾರದು. ಅಧಿಕಾರಿಗಳು ಕೊಟ್ಟ ಮಾಹಿತಿ ಪ್ರಕಾರ 13,52,000 ಮೆಟ್ರಿಕ್ ಟನ್ ರಸ ಗೊಬ್ಬರ ಇದೆ. ಯಾವುದೇ ಕಾರಣಕ್ಕೂ ಗೊಬ್ಬರ, ಕೀಟನಾಶಕ, ಬಿತ್ತನೆ ಬೀಜ ಇಲ್ಲ ಎಂದು ರೈತರಿಂದ ದೂರು ಬರಬಾರದು ಎಂದು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಜವಾಬ್ದಾರಿ ನಿರ್ವಹಣೆ ಮಾಡಿಲ್ಲ ಎಂದರೆ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ಕೊಡಲಾಗಿದೆ. ಕರ್ತವ್ಯ ಲೋಪ, ಬೇಜವಾಬ್ದಾರಿತನ ತೋರಿಸಿದರೆ ಎಚ್ಚರಿಕೆ ಕ್ರಮ ಕೈಗೊಳ್ಳಲಾಗುದು. ಡಿಸಿಗಳು ಪ್ರವಾಸ ಮಾಡಬೇಕು, ಸ್ಥಳದಲ್ಲಿ ಕುಳಿತು ನಿರ್ಣಯ ಮಾಡಬಾರದು ಎಂದು ಸೂಚಿಸಲಾಗಿದೆ. ಬೆಂಗಳೂರು ನಗರದಲ್ಲಿ ಮಳೆಯಿಂದ ಅಂಡರ್ ಪಾಸ್ ನೀರು ನಿಂತರೆ ಸಂಚಾರ ಬಂದ್ ಮಾಡಲು, ವೈಜ್ಞಾನಿಕವಾಗಿ ಸರಿಪಡಿಸಲು ಸೂಚನೆ ನೀಡಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಶೇ.50 ರಷ್ಟು ರಾಜಕಾಲುವೆ ತೆರವು ಮಾಡಿದ್ದೇವೆ. ಈಗ ಮುಂದುವರಿಸಲು ಸೂಚನೆ ನೀಡಲಾಗಿದೆ ಎಂದರು.
ಇದನ್ನೂ ಓದಿ: ಮುಂಗಾರು ಪೂರ್ವ ಮಳೆಗೆ ಕುಂದಾನಗರಿ ಜನ ತತ್ತರ: ಧಾರಾಕಾರ ಮಳೆಗೆ ಧರೆಗುರುಳಿದ ಮರ, ವಿದ್ಯುತ್ ಕಂಬಗಳು