ಬೆಂಗಳೂರು : ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಆರು ತಿಂಗಳು ಪೂರೈಸಿದ್ದು, ಪಂಚ ಗ್ಯಾರಂಟಿಗಳ ಅನುಷ್ಠಾನದ ಪ್ರಗತಿಯ ಮಾಹಿತಿಯನ್ನು ನೀಡಿದೆ. ಅನುಷ್ಠಾನವಾಗಿರುವ ನಾಲ್ಕು ಗ್ಯಾರಂಟಿಗಳ ಪ್ರಗತಿ ಹೇಗಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.
ಕಳೆದ 6 ತಿಂಗಳ ಅವಧಿಯಲ್ಲಿ ಶಕ್ತಿ ಯೋಜನೆಯಡಿ ನಾಡಿನ ಮಹಿಳೆಯರು ನಿತ್ಯ ಸರಾಸರಿ 60 ಲಕ್ಷದಂತೆ ಒಟ್ಟು 97.2 ಕೋಟಿಗೂ ಅಧಿಕ ಬಾರಿ ಉಚಿತ ಪ್ರಯಾಣ ಬೆಳೆಸಿದ್ದಾರೆ. ಈವರೆಗೆ ಒಟ್ಟು ರೂ. 2,303 ಕೋಟಿ ಮೊತ್ತದ ಉಚಿತ ಟಿಕೆಟ್ ವಿತರಿಸಲಾಗಿದೆ. ಕಳೆದ 6 ತಿಂಗಳ ಅವಧಿಯಲ್ಲಿ ನಾಡಿನ ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನು ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ ಎಂದು ಸಿಎಂ ತಿಳಿಸಿದ್ದಾರೆ.
ಗೃಹ ಲಕ್ಷ್ಮಿ ಯೋಜನೆ : ಗೃಹಲಕ್ಷ್ಮಿ ಯೋಜನೆಯಡಿ ರೂ. 17,500 ಕೋಟಿ ಅನುದಾನ ಮೀಸಲಿಟ್ಟಿದ್ದು, ಈವರೆಗೆ ರೂ. 11,200 ಕೋಟಿ ಅನುದಾನ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ. 99.52 ಲಕ್ಷ ನೊಂದಾಯಿತ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ.
ಕುಟುಂಬ ನಿರ್ವಹಣೆಯ ಹೊಣೆಹೊತ್ತ ನಾಡಿನ ಮಹಿಳೆಯರಿಗೆ ಬೆಲೆಯೇರಿಕೆಯಿಂದ ತುಸು ನೆಮ್ಮದಿ ನೀಡಿ, ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ನಾವು ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದು, ಮಾಸಿಕ ರೂ. 2,000 ಸಹಾಯಧನ ನೀಡುತ್ತಿದ್ದೇವೆ. ಯೋಜನೆಗೆ ನೊಂದಾಯಿಸಿಕೊಂಡಿರುವ 99 ಲಕ್ಷದ 52 ಸಾವಿರ ಮಹಿಳೆಯರ ಖಾತೆಗೆ ಹಣ ಜಮೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಗೃಹಜ್ಯೋತಿ ಯೋಜನೆ : ರಾಜ್ಯದ ಪ್ರತಿ ಕುಟುಂಬಕ್ಕೆ ಮಾಸಿಕ ಗರಿಷ್ಠ 200 ಯುನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಯಡಿ ನೋಂದಾಯಿತ 1.56 ಕೋಟಿ ಕುಟುಂಬಗಳಿಗೆ ಅನುಕೂಲವಾಗಿದೆ. ಕಳೆದ 3 ತಿಂಗಳ ಅವಧಿಯಲ್ಲಿ ಈ ಯೋಜನೆಗಾಗಿ ರೂ. 2,152 ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ. ವಿದ್ಯುತ್ ಬಿಲ್ ಹೊರೆಯಿಂದ ಕಂಗೆಟ್ಟಿದ್ದ ಜನರಿಗೆ ಉಚಿತ ವಿದ್ಯುತ್ ಸೌಲಭ್ಯ ನೀಡಿ, ನೆಮ್ಮದಿಯ ಬದುಕು ಕಲ್ಪಿಸುವ ಬದ್ಧತೆಯೊಂದಿಗೆ ಜಾರಿಗೆ ತಂದ ಗೃಹಜ್ಯೋತಿ ಯೋಜನೆ ನಾಡಿನ ಪ್ರತಿ ಮನೆಯನ್ನು ಬೆಳಗುತ್ತಿದೆ ಎಂದಿದ್ದಾರೆ.
ಅನ್ನಭಾಗ್ಯ ಯೋಜನೆ : ಬಡ ಕುಟುಂಬಗಳ ಪ್ರತಿ ಫಲಾನುಭವಿಗೆ ಮಾಸಿಕ ತಲಾ 10 ಕೆ.ಜಿ ಅಕ್ಕಿ ನೀಡಲಾಗುತ್ತಿದ್ದು, ಅಕ್ಕಿಯ ಅಲಭ್ಯತೆಯ ಕಾರಣಕ್ಕಾಗಿ ತಲಾ ರೂ.170ರಂತೆ ಹಣದ ವರ್ಗಾವಣೆ ಮಾಡಲಾಗುತ್ತಿದೆ. ಯೋಜನೆಯಡಿ 3.92 ಕೋಟಿ ಫಲಾನುಭವಿಗಳ ಖಾತೆಗೆ ರೂ. 2,444 ಕೋಟಿ ಹಣ ಜಮೆಯಾಗಿದೆ.
ಬಡತನ ಮತ್ತು ಹಸಿವು ಇಂದಿನ ಸಮಾಜವನ್ನು ಬಾಧಿಸುತ್ತಿರುವ ಮಾರಕ ರೋಗಗಳು. ನಾಡಿನ ಯಾರೊಬ್ಬರೂ ಹಸಿದು ಮಲಗಬಾರದು ಎಂಬ ಉದ್ದೇಶದಿಂದ ಅನ್ನಭಾಗ್ಯ ಯೋಜನೆಯಡಿ ಬಡಕುಟುಂಬಗಳ ಪ್ರತಿ ಸದಸ್ಯನಿಗೆ ತಲಾ 10 ಕೆ.ಜಿ ಅಕ್ಕಿ ನೀಡುವ ಘೋಷಣೆ ಮಾಡಲಾಗಿತ್ತು. 5 ಕೆ. ಜಿ ಹೆಚ್ಚುವರಿ ಅಕ್ಕಿ ಲಭ್ಯವಿಲ್ಲದೇ ಇರುವುದರಿಂದ ರೂ. 170 ಅನ್ನು ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದೆ ಎಂದಿದ್ದಾರೆ.
ಜನವರಿಯಲ್ಲಿ ಯುವನಿಧಿ ಯೋಜನೆ : ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ.3,000 ಹಾಗೂ ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ರೂ. 1,500 ನಿರುದ್ಯೋಗ ಭತ್ಯೆ ನೀಡುವ ಯುವನಿಧಿ ಯೋಜನೆ ಜನವರಿಯಿಂದ ಜಾರಿಗೊಳಿಸಲಾಗುವುದು ಎಂದು ಸಿಎಂ ಎಕ್ಸ್ ಪೋಸ್ಟ್ ಮಾಡಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 4.5 ಲಕ್ಷ ಯುವ ಜನರಿಗೆ ಇದರಿಂದ ಅನುಕೂಲವಾಗುವ ನಿರೀಕ್ಷೆ ಇದೆ. ಶಿಕ್ಷಣ ಪೂರ್ತಿಗೊಳಿಸಿದ ಪದವೀಧರ ಯುವಜನರಿಗೆ ಉದ್ಯೋಗ ಹುಡುಕಿಕೊಳ್ಳಲು ಅಗತ್ಯ ಸಮಯ ದೊರಕಬೇಕು ಮತ್ತು ಈ ಅವಧಿಯಲ್ಲಿ ಅವರು ಹತಾಶೆ, ಒತ್ತಡಗಳಿಗೆ ಒಳಗಾಗದೇ ತಮ್ಮಿಷ್ಟದ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಸಾಕಷ್ಟು ಅವಕಾಶ ಸಿಗಬೇಕು. ಇದು ಸಾಧ್ಯವಾಗಬೇಕಾದರೆ ನಿರುದ್ಯೋಗದಿಂದ ಎದುರಾಗುವ ಆರ್ಥಿಕ ಸಮಸ್ಯೆಗಳು ಅವರನ್ನು ಬಾಧಿಸದಂತೆ ತಡೆಯಬೇಕು. ಈ ಕಾರಣಕ್ಕಾಗಿ ನಾವು ಪದವೀಧರ ಮತ್ತು ಡಿಪ್ಲೊಮಾ ಪದವೀಧರ ನಿರುದ್ಯೋಗಿಗಳಿಗೆ ಮಾಸಿಕ ನಿರುದ್ಯೋಗ ಭತ್ಯೆ ಒದಗಿಸುವ ಯುವನಿಧಿ ಯೋಜನೆ ಜಾರಿಗೆ ಮುಂದಾಗಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ : ನಮ್ಮ ಯೋಜನೆ ವಿರೋಧಿಸಿದವರೇ ಈಗ ಗ್ಯಾರಂಟಿ ಹಿಂದೆ ಬಿದ್ದಿದ್ದಾರೆ: ಸಿಎಂ ಸಿದ್ದರಾಮಯ್ಯ