ಬೆಂಗಳೂರು: ''ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರದ್ದು ಯಾವಾಗಲೂ ಹಿಟ್ ಅಂಡ್ ರನ್ ಕೇಸ್ ಅಷ್ಟೇ. ವರ್ಗಾವಣೆ ವಿಚಾರದಲ್ಲಿ ಅನಗತ್ಯ ಆರೋಪ ಮಾಡಿದ್ದಾರೆ. ಪೆನ್ ಡ್ರೈವ್ ವಿಚಾರ ಬಿಡಲ್ಲ ಎಂದಿದ್ದಾರೆ. ಆದರೆ, ಪೆನ್ ಡ್ರೈವ್ನಲ್ಲಿ ಏನಾದರೂ ಇದ್ದರಲ್ಲವೇ ಅವರು ಅದನ್ನು ಹೊರಬಿಡೋದು'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟಾಂಗ್ ಕೊಟ್ಟರು.
ನಗರದ ಖಾಸಗಿ ಹೋಟೆಲ್ನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಹಿಂದೆ ಪೆನ್‍ಡ್ರೈವ್ ತೋರಿಸಿದ್ದರು. ಅದನ್ನು ಸಾಬೀತು ಮಾಡಿ ಎಂದರೆ ಮಾಡಿದರಾ? ಸುಮ್ಮನೆ ಆರೋಪ ಮಾಡುತ್ತಾರೆ'' ಎಂದು ವ್ಯಂಗ್ಯವಾಡಿದರು.
''ದೆಹಲಿ ಪ್ರವಾಸದ ವೇಳೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ್ದೆ. ಕೇವಲ ಉಭಯ ಕುಶಲೋಪರಿ ವಿಚಾರಿಸಿದೆ ಬೇರೆ ಯಾವುದೇ ಮಾತುಕತೆ ನಡೆಸಿಲ್ಲ. ಅನ್ನಭಾಗ್ಯ ಯೋಜನೆಗೆ ಅಕ್ಕಿ ನೀಡುವ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದ ಜೊತೆ ಪಿಯೂಶ್ ಗೋಯಲ್ ಅವರೊಂದಿಗೆ ಮಾತನಾಡಿದ್ದು, ಅಕ್ಕಿ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ಅವರು ರಾಜಕೀಯ ಮಾಡಿದ್ದಾರೆ'' ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು.
'ವೈಎಸ್‌ಟಿ ಟ್ಯಾಕ್ಸ್'- ಹೆಚ್.ಡಿ. ಕುಮಾರಸ್ವಾಮಿ: ರಾಜ್ಯದಲ್ಲಿ ವೈಎಸ್‌ಟಿ ಟ್ಯಾಕ್ಸ್ ಶುರುವಾಗಿದೆ ಎಂದು ಈ ಹಿಂದೆ ಆರೋಪಿಸಿದ್ದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮತ್ತೆ ವೈಎಸ್‌ಟಿ ಟ್ಯಾಕ್ಸ್ ಬಾಂಬ್ ಸಿಡಿಸಿದ್ದಾರೆ. ಯುರೋಪ್ ಪ್ರವಾಸ ಮುಸಿಕೊಂಡು, ನಿನ್ನೆ ತಡರಾತ್ರಿ ಬೆಂಗಳೂರಿಗೆ ಆಗಮಿಸಿದ ಕುಮಾರಸ್ವಾಮಿ ಅವರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ವೈಎಸ್‌ಟಿ ನವರಿಗೆ ಏನು ಕೆಲಸ ಎಂದು ಪ್ರಶ್ನಿಸಿದರು. ಬೆಂಗಳೂರಿನ ಗರುಡ ಮಹಲ್‌ನಲ್ಲಿ ಪೊಲೀಸ್ ಡ್ರೆಸ್‌ನಲ್ಲಿ ಗೃಹ ಇಲಾಖೆಯ ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಗೃಹ ಸಚಿವರು ಚರ್ಚೆ ಮಾಡುವಾಗ ವೈಎಸ್‌ಟಿನವರು ಏಕೆ ಇದ್ದರು ಎಂದು ಪ್ರಶ್ನಿಸಿದರು. ಸಚಿವರನ್ನು ಜೊತೆಗಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗಿ ಕಾಂಗ್ರೆಸ್ ಹೈಕಮಾಂಡ್‌ಗೆ ರಿಪೋರ್ಟ್ ಕಾರ್ಡ್ ಕೊಟ್ಟಿದ್ದಾರೆ. ರಿಪೋರ್ಟ್ ಕಾರ್ಡ್‌ನ್ನು ಹೈಕಮಾಂಡ್‌ಗೆ ಕೊಡುವುದಲ್ಲ. ಜನತೆಯ ಮುಂದಿಡಬೇಕು'' ಎಂದರು.
''ವರ್ಗಾವಣೆಗೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಪೆನ್ ಡ್ರೈವ್ ಈಗ ಬಿಡುಗಡೆ ಮಾಡುವುದಿಲ್ಲ. ಸಂದರ್ಭ ಬಂದಾಗ ಬಹಿರಂಗಪಡಿಸುತ್ತೇನೆ" ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. "ಗುತ್ತಿಗೆದಾರರಿಗೆ ಇಂತಿಷ್ಟು ಪರ್ಸೆಂಟೇಜ್ ನೀಡಲು ಹೇಳಿದ್ದಾರೆ ಎಂಬ ಮಾಹಿತಿ ಯುರೋಪ್‍ನಲ್ಲಿದ್ದಾಗಲೇ ಬಂದಿತ್ತು. ಪರ್ಸೆಂಟೇಜ್ ಕುರಿತಂತೆ ಗುತ್ತಿಗೆದಾರರ ಸಂಘದವರು ಸಭೆ ನಡೆಸಬೇಕಿತ್ತಂತೆ. ಮಂತ್ರಿ, ಮಂತ್ರಿಗಳ ಹಿಂಬಾಲಕರು, ಗುತ್ತಿಗೆದಾರರಿಂದ ಪರ್ಸೆಂಟೇಜ್ ಕೇಳುತ್ತಿದ್ದಾರಂತೆ. ಇವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮುಂದೆ ಚರ್ಚೆ ಮಾಡುತ್ತಾರಂತೆ'' ಎಂದು ವ್ಯಂಗ್ಯವಾಡಿದರು.
ಜೆಡಿಎಸ್ ಬಗ್ಗೆ ಕಾಂಗ್ರೆಸ್ಗೆ ಭಯ: ಸರ್ಕಾರ ಪತನಕ್ಕೆ ಸಿಂಗಾಪುರದಲ್ಲಿ ಷಡ್ಯಂತ್ರ ನಡೆದಿದೆ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಕಿಡಿ ಕಾರಿರುವ ಕುಮಾರಸ್ವಾಮಿ, ''ನಾನು ಕುಟುಂಬಸಮೇತ ಯುರೋಪ್ ಪ್ರವಾಸಕ್ಕೆ ಹೋಗಿದ್ದೆ. ಆದರೆ, ಸರ್ಕಾರ ಕೆಡವಲು ಹೋಗಿದ್ದೇ ಎಂಬ ರೀತಿಯಲ್ಲಿ ಬಿಂಬಿಸಲಾಗಿದೆ. ಜೆಡಿಎಸ್ ನವರ ಬಗ್ಗೆ ಕಾಂಗ್ರೆಸ್‌ನವರಿಗೆ ಎಷ್ಟು ಭಯವಿದೆ ಎಂಬುದು ಇದರಿಂದ ಗೊತ್ತಾಗುತ್ತದೆ'' ಎಂದು ಕುಟುಕಿದರು.
''ವಿದೇಶದಲ್ಲಿದ್ದರೂ ರಾಜ್ಯದ ರಾಜಕೀಯ ವಿದ್ಯಮಾನಗಳ ನಿತ್ಯದ ಬೆಳವಣಿಗೆಗಳನ್ನು ಗಮನಿಸಿದ್ದೆನೆ. ನಾನು ಕುಟುಂಬ ಸಮೇತ ವಿದೇಶಕ್ಕೆ ಹೋಗಿದ್ದರೂ ಸರ್ಕಾರ ಉರುಳಿಸಲು ಹೋಗಿದ್ದೇನೆ ಎಂದು ಹೇಳಿದ್ದಾರೆ. ಜೆಡಿಎಸ್ 19 ಸ್ಥಾನ ಗೆದ್ದಿದ್ದರೂ ಅವರಿಗೆ ನಮ್ಮ ಭಯ ಇದೆ'' ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಅಣ್ಣ ಮಾತನಾಡುವುದನ್ನು ತಮ್ಮ ಕೇಳ್ತಾ ಇರ್ತಾರೆ: ಹೆಚ್ಡಿಕೆಗೆ ಡಿಕೆಶಿ ಟಾಂಗ್