ಬೆಂಗಳೂರು: ಪಿಎಂ-ಕುಸುಮ್ ಕಾಂಪೋನೆಂಟ್ ಸಿ (PM-KUSUM Component C) ಯೋಜನೆಯಡಿ ಫೀಡರ್ ಸೌರೀಕರಣಕ್ಕಾಗಿ ರಾಜ್ಯದ 400 ಉಪಕೇಂದ್ರಗಳ ಬಳಿ ಸೌರ ವಿದ್ಯುತ್ ಘಟಕ ಸ್ಥಾಪನೆಗೆ ಇಂಧನ ಇಲಾಖೆಗೆ ಜಮೀನು ಹಸ್ತಾಂತರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕೂಡಲೇ ಕಾರ್ಯಪ್ರವೃತ್ತರಾಗಿ ಕ್ರಮ ವಹಿಸಲು ಸುತ್ತೋಲೆ ಹೊರಡಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಪಿಎಂ-ಕುಸುಮ್ ಕಾಂಪೋನೆಂಟ್ ಸಿ ಯೋಜನೆಗೆ ಗುರುತಿಸಿದ ಸರ್ಕಾರಿ ಭೂಮಿಯನ್ನು ಯೋಜನೆಯ ಅನುಷ್ಠಾನಕ್ಕಾಗಿ ಕಂದಾಯ ಇಲಾಖೆಗೆ ಹಸ್ತಾಂತರಿಸುವ ಕುರಿತು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗೃಹ ಕಚೇರಿ ಕೃಷ್ಣಾದಲ್ಲಿ ಉನ್ನತ ಮಟ್ಟದ ಸಭೆ ನಡೆಸಿದರು. 400 ವಿದ್ಯುತ್ ಉಪಕೇಂದ್ರಗಳ ಸಮೀಪದಲ್ಲಿ ಫೀಡರ್ ಸೌರೀಕರಣ ಅನುಷ್ಠಾನಕ್ಕಾಗಿ 3,000 ಎಕರೆ ಭೂಮಿ ಅಗತ್ಯವಿದೆ. ಜಿಲ್ಲಾಧಿಕಾರಿಗಳಿಗೆ ಭೂಮಿ ಹಂಚಿಕೆ ಮಾಡಲು ಅಧಿಕಾರ ಪ್ರತ್ಯಾಯೋಜನೆ ಮಾಡಿದರೆ ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಲು ಸಾಧ್ಯವಿದೆ. ಇದರಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲೇ ವಿದ್ಯುತ್ ಪೂರೈಕೆ ಮಾಡಲು ಸಹ ಸಾಧ್ಯವಾಗುತ್ತದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಂಧನ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಸ್ಥಳೀಯ ತಹಸೀಲ್ದಾರರೊಂದಿಗೆ ಜಮೀನು ಗುರುತಿಸಿ, ಸೂಕ್ತ ಪ್ರಸ್ತಾವನೆ ಕೂಡಲೇ ಕಳುಹಿಸಿ, ಕಂದಾಯ ಇಲಾಖೆಯು ಇಂಧನ ಇಲಾಖೆಗೆ ಭೂಮಿಯನ್ನು ಲೀಸ್ ಆಧಾರದಲ್ಲಿ ಹಸ್ತಾಂತರಿಸಲು ಸೂಚಿಸಿದರು. ಆದರೆ ಈ ಆಸ್ತಿಯನ್ನು ಇಂಧನ ಇಲಾಖೆ ಖಾಸಗಿಯವರಿಗೆ ಹಸ್ತಾಂತರಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಹಸ್ತಾಂತರ ಮಾಡುವಂತೆ ಸೂಚಿಸಿದರು.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಖುದ್ದು ಸೂಚನೆ ನೀಡುವುದು ಹಾಗೂ ಎಲ್ಲ ಜಿಲ್ಲಾ ಉಸ್ತುವಾರಿ ಸಚಿವರಿಗೂ ಈ ಕುರಿತು ಆದ್ಯತೆ ನೀಡಲು ಸೂಚಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ.ಗೋವಿಂದರಾಜು, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಮುಖ್ಯಮಂತ್ರಿಯವರ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕಳೆದ ಅಕ್ಟೋಬರ್ನಲ್ಲಿ ಇಂಧನ ಇಲಾಖೆ ಪ್ರಗತಿ ಪರಿಶೀಲನೆ ಸಭೆಯನ್ನು ಸಿಎಂ ಸಿದ್ದರಾಮಯ್ಯ ನಡೆಸಿದ್ದರು. ಆ ವೇಳೆ ಕಳೆದ 5 ವರ್ಷಗಳಲ್ಲಿ ಯಾವುದೇ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಸೇರ್ಪಡೆಗೊಂಡಿಲ್ಲ. ನವೀಕರಿಸಬಹುದಾದ ಇಂಧನದಲ್ಲಿ ಖಾಸಗಿ ವಲಯದಲ್ಲಿ ಸಹ ಯಾವುದೇ ಹೊಸ ವಿದ್ಯುತ್ ಖರೀದಿ ಒಪ್ಪಂದಗಳಾಗಿಲ್ಲ ಎಂಬ ಮಾಹಿತಿಯನ್ನು ನೀಡಿದ್ದರು.
ಇದನ್ನೂ ಓದಿ: 'ಪಾರ್ಕ್, ಆಟದ ಮೈದಾನಕ್ಕೆ ಮೀಸಲಿಟ್ಟ ಜಾಗ 5 ವರ್ಷದಲ್ಲಿ ಅಭಿವೃದ್ಧಿ ಮಾಡದಿದ್ದಲ್ಲಿ ರದ್ದಾಗಲಿದೆ'