ಬೆಂಗಳೂರು: ಕಳ್ಳಭಟ್ಟಿಗೆ ಕಡಿವಾಣ ಹಾಕುವ ಮೂಲಕ ಅಕ್ರಮ ಮದ್ಯ ನುಸುಳುವಿಕೆ ತಪ್ಪಿಸುವ ಜೊತೆಗೆ ಬಾಕಿ ತೆರಿಗೆ ವಸೂಲಿ ಮಾಡಿ ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಸಾಧಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು.
ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನೆಯಲ್ಲಿ ಈ ಸೂಚನೆ ನೀಡಿದರು. ಇಲಾಖೆಯ ಪ್ರಸಕ್ತ ವರ್ಷದ ರಾಜಸ್ವ ಸಂಗ್ರಹ ಗುರಿ 36,000 ಕೋಟಿ ರೂ. ಇದ್ದು, ತೆರಿಗೆ ಸಂಗ್ರಹದ ಬೆಳವಣಿಗೆ ದರ 5.31%ರಷ್ಟಿದೆ. ನಿಗದಿತ ಗುರಿ ಸಾಧನೆಗೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.
ರಾಜ್ಯದ ಗಡಿ ಭಾಗಗಳಲ್ಲಿ ವಿಶೇಷವಾಗಿ ಗೋವಾ ರಾಜ್ಯದಿಂದ ಅಕ್ರಮ ಮದ್ಯ ಸಾಗಾಣಿಕೆ ಕುರಿತು ಜಾರಿ ದಳದವರು ಹೆಚ್ಚಿನ ನಿಗಾ ವಹಿಸಬೇಕು. ಕಳ್ಳಭಟ್ಟಿ ಮದ್ಯ ತಯಾರಿಕೆ ಮಾರಾಟದಿಂದ ಬಡವರ ಆದಾಯ ಮತ್ತು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದರಿಂದ ಕಳ್ಳಭಟ್ಟಿ ಮದ್ಯ ತಯಾರಿಕೆ ಮತ್ತು ಮಾರಾಟವನ್ನು ಮಟ್ಟಹಾಕಬೇಕು ಎಂದರು.
ಎಲ್ಲ ಕಡೆ ಜಾಗೃತದಳ ಕಟ್ಟೆಚ್ಚರ ವಹಿಸಬೇಕು. ಎಲ್ಲ ಉಪ ಆಯುಕ್ತರು ರಾಜಸ್ವ ಸಂಗ್ರಹ ಹೆಚ್ಚಳಕ್ಕೆ ಆದ್ಯತೆ ನೀಡಬೇಕು. ಹಳೇ ಬಾಕಿ ತೆರಿಗೆ ಸಂಗ್ರಹಿಸಲು ಕ್ರಮ ಕೈಗೊಳ್ಳಬೇಕು. ಅಬಕಾರಿ ಇಲಾಖೆಯಲ್ಲಿ ಸುಧಾರಣಾ ಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು. ಹಾಗೆಯೇ, ಗಡಿ ಭಾಗಗಳ ಚೆಕ್‌ಪೋಸ್ಟ್ ನಲ್ಲಿ ಹೋಂ ಗಾರ್ಡ್‌ಗಳ ಸೇವೆ ಪಡೆದುಕೊಂಡು ಇನ್ನಷ್ಟು ಬಲ ಪಡಿಸಲು ಹಾಗೂ ಇತರೆ ಸೌಲಭ್ಯಕ್ಕಾಗಿ ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.
ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಮೇಲೆ ನಿಗಾ ಇಡಿ : ಸಾರಿಗೆ-ಗಣಿ-ಮುದ್ರಾಂಕ ಇಲಾಖೆ ತೆರಿಗೆ ಸಂಗ್ರಹದಲ್ಲಿ ಆಶಾದಾಯಕ ಬೆಳವಣಿಗೆ ಕಾಣುತ್ತಿದೆ. ಆದರೆ, ಗುರಿ ಮುಟ್ಟುವ ದಿಕ್ಕಿನಲ್ಲಿ ಸಮರ್ಪಕ ಕಾರ್ಯಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಸಿಎಂ ಮೂರೂ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ವೇಳೆ ಇಲಾಖೆಯ ಕಾರ್ಯಕ್ಷಮತೆ ಮತ್ತು ತೆರಿಗೆ ಸಂಗ್ರಹದ ಗುರಿ ತಲುಪಲು ತೆಗೆದುಕೊಂಡಿರುವ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಈ ಸೂಚನೆ ನೀಡಿದರು.
ಅರಣ್ಯ ಮತ್ತು ಗಣಿ ಇಲಾಖೆ ನಡುವೆ ಇರುವ ವ್ಯಾಜ್ಯ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಎರಡೂ ಇಲಾಖೆಗಳ ಸಚಿವರ ನೇತೃತ್ವದಲ್ಲಿ ಪ್ರತ್ಯೇಕ ಸಭೆಯನ್ನು ತ್ವರಿತವಾಗಿ ನಡೆಸಬೇಕು. ಅರಣ್ಯ ಪ್ರದೇಶದಲ್ಲಿ ಬಿದ್ದಿರುವ ಗಣಿ ಸಂಪತ್ತು ಸೋರಿಕೆ ಆಗದಂತೆ, ಕಳ್ಳತನವಾಗದಂತೆ ಕಟ್ಟೆಚ್ಚರ ವಹಿಸಬೇಕು. ಮುಖ್ಯ ಖನಿಜ ಮತ್ತು ಉಪ ಖನಿಜ ಕಳ್ಳತನ, ತೆರಿಗೆ ವಂಚನೆ ಬಗ್ಗೆ ತೀವ್ರ ನಿಗಾ ಇಡಬೇಕು. ಡ್ರೋನ್ ಸಮೀಕ್ಷೆ ಮೂಲಕ ಸರ್ಕಾರಕ್ಕೆ ಸುಳ್ಳು ಲೆಕ್ಕ, ತಪ್ಪು ಲೆಕ್ಕ ಕೊಡುತ್ತಿರುವ ಗಣಿಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಡ್ರೋನ್ ಸಮೀಕ್ಷೆ ಬಳಿಕ ನೈಜ ಚಿತ್ರಣ ದೊರಕುತ್ತದೆ. ಹೀಗಾಗಿ, ಈ ಪ್ರಯತ್ನದ ಸಾಧ್ಯಸಾಧ್ಯತೆಗಳ ಬಗ್ಗೆ ಪರಿಶೀಲಿಸುವಂತೆ ಸಿಎಂ ಸಲಹೆ ನೀಡಿದರು.
ಶಕ್ತಿ ಯೋಜನೆಯಿಂದಾಗಿ ಪುರುಷ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿ ಯೋಜನೆ ಯಶಸ್ವಿ ಆಗಿದೆ ಎನ್ನುವ ಮಾಹಿತಿ ಅಧಿಕಾರಿಗಳಿಂದ ಪಡೆದು ಅದಕ್ಕೆ ಸಿಎಂ ಮೆಚ್ಚುಗೆ ವ್ಯಕ್ತಪಡಿಸಿದರು. ಹೊಸ ಬಸ್ಗಳ ಖರೀದಿ ಬಳಿಕ ಹೊಸ ಚಾಲಕರು ಮತ್ತು ನಿರ್ವಾಹಕರ ಅಗತ್ಯ ಬೀಳುತ್ತದೆ. ಅವರ ನೇಮಕದ ಕುರಿತು ಪ್ರತ್ಯೇಕ ಸಭೆ ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಮೂರೂ ಇಲಾಖೆ ಅಧಿಕಾರಿಗಳಿಂದ ಸಮಗ್ರ ವಿವರ ಪಡೆದ ಮುಖ್ಯಮಂತ್ರಿಗಳು ಕೊನೆಯದಾಗಿ ಮೂರೂ ಇಲಾಖೆ ನಿಗದಿತ ಪ್ರಮಾಣದಲ್ಲಿ ತೆರಿಗೆ ಸಂಗ್ರಹ ಮಾಡಬೇಕು. ಮೊದಲಿಗೆ ತೆರಿಗೆ ಸೋರಿಕೆ ಮತ್ತು ವಂಚನೆ ಬಗ್ಗೆ ತೀವ್ರ ನಿಗಾ ಇಡಿ ಎಂದು ತಿಳಿಸಿದರು.
ಇದನ್ನೂ ಓದಿ : ತೆರಿಗೆ ವಂಚನೆ, ತೆರಿಗೆ ಸೋರಿಕೆ, ತೆರಿಗೆ ಕಳ್ಳತನದ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸಿಎಂ ಸೂಚನೆ