ಬೆಂಗಳೂರು: ಮೂರು ಜಿಲ್ಲೆಗಳಾದ ತುಮಕೂರು, ಯಾದಗಿರಿ ಹಾಗೂ ಚಿತ್ರದುರ್ಗ ಶಾಸಕರು ಹಾಗೂ ಸಚಿವರ ಸಭೆ ಮುಕ್ತಾಯವಾಗಿದೆ. ಈ ವೇಳೆ ಶಾಸಕರು ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ತುಮಕೂರು, ಯಾದಗಿರಿ, ಚಿತ್ರದುರ್ಗ ಜಿಲ್ಲೆಗಳ ಕ್ಷೇತ್ರವಾರು ಸಮಸ್ಯೆ, ಅನುದಾನ, ಅಭಿವೃದ್ಧಿ ಸಂಬಂಧ ಸಭೆ ನಡೆಯಿತು. ಮೊದಲಿಗೆ ತುಮಕೂರು ಜಿಲ್ಲೆಯ ಸಚಿವರು, ಶಾಸಕರ ಜೊತೆ ಸಭೆ ನಡೆಸಿದರು.
ಸಭೆಯ ಬಳಿಕ ಕುಣಿಗಲ್ ಶಾಸಕ ಡಾ.ರಂಗನಾಥ್ ಮಾತನಾಡಿ, ''ಇದು ವಿನೂತನ ಪ್ರಯತ್ನ. ನಮ್ಮ ನಮ್ಮ ತಾಲ್ಲೂಕುಗಳ ಸಮಸ್ಯೆ, ಅನುದಾನ, ಚುನಾವಣಾ ಭರವಸೆಗಳ ಬಗ್ಗೆ ಚರ್ಚೆ ನಡೆಸಲಾಯ್ತು. ಸಿಎಂ ಗಮನಕ್ಕೆ ತರಲಾಯಿತು. ಫಲಪ್ರದವಾಗಿ ಸಭೆ ಮುಗಿದಿದೆ. ನನಗೆ ಸಂತೋಷವಾಗಿದೆ'' ಎಂದರು. "ಸಚಿವರಿಗೆ ಅವರ ಇಲಾಖೆ ಬಗ್ಗೆ ತಿಳಿಯಲು ಸ್ವಲ್ಪ ಸಮಯ ಬೇಕು. ಸಚಿವರು ಕೂಡಾ ಸಭೆಯಲ್ಲಿ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ. ಡಿಸಿಎಂ ಡಿಕೆಶಿ ಕೂಡ ಸಚಿವರಿಗೆ ಕೆಲವು ಸಂದೇಶ ನೀಡಿದ್ದಾರೆ. ಸಿಎಂ ಕೂಡ ಸಚಿವರಿಗೆ ಬಹಳಷ್ಟು ಸಂದೇಶ ರವಾನಿಸಿದ್ದಾರೆ. ಸಚಿವರ ಜೊತೆಗೆ ಸಮಸ್ಯೆ ದೊಡ್ಡದೇನಲ್ಲ'' ಎಂದು ಹೇಳಿದರು.
ಅನುದಾನ ಕೊರತೆ ಇಲ್ಲ: ''ಕ್ಷೇತ್ರಗಳ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ. ವಿವಿಧ ಶಾಸಕರು ಅನೇಕ ದೂರುಗಳನ್ನು ನೀಡಿದ್ದಾರೆ. ಅಭಿವೃದ್ಧಿ ಕೆಲಸಗಳು ನಡೆಯಲಿದೆ ಎಂಬ ಆಶಾಭಾವನೆ ಇದೆ. ಅನುದಾನ ಕೊರತೆ ಇಲ್ಲ. ನಾವು ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಲಿದ್ದೇವೆ'' ಎಂದು ಸಚಿವ ಕೆ.ಎನ್.ರಾಜಣ್ಣ ಹೇಳಿದರು. ಸಚಿವ ಚಲುವರಾಯ ಸ್ವಾಮಿ ಮೇಲಿನ ದೂರು ವಿಚಾರವಾಗಿ ಪ್ರತಿಕ್ರಿಯಿಸಿ, "ಆ ಪತ್ರ ಅಸಲಿಯೋ, ನಕಲಿಯೋ ಎಂಬುದನ್ನು ಪರಿಶೀಲಿಸಬೇಕಾಗಿದೆ. ಬಳಿಕ ಕ್ರಮ ತೆಗೆದುಕೊಳ್ಳಬಹುದು'' ಎಂದು ತಿಳಿಸಿದರು.
ಹೆಚ್ಚಿನ ಅನುದಾನ ನಿರೀಕ್ಷೆ ಬೇಡ: "ಈ ವರ್ಷ ಹೆಚ್ಚಿನ ಅನುದಾನ ನಿರೀಕ್ಷೆ ಮಾಡಬೇಡಿ. ಅಗತ್ಯ ಅನುದಾನವನ್ನು ಹಂತಹಂತವಾಗಿ ಬಿಡುಗಡೆ ಮಾಡುವುದಾಗಿ ಸಿಎಂ ತಿಳಿಸಿದ್ದಾರೆ" ಎಂದು ಗುಬ್ಬಿ ಶಾಸಕ ಶ್ರೀನಿವಾಸ್ ಮಾಹಿತಿ ನೀಡಿದರು. ಕಳೆದ ಸರ್ಕಾರದ ಅವಧಿಯಲ್ಲಿ ಟೆಂಡರ್ ಕರೆಯದೇ ಕಾಮಗಾರಿ ಮಾಡಲಾಗಿದೆ. ಈಗ ಗುತ್ತಿಗೆದಾರರು ಕಾಮಗಾರಿ ಬಿಲ್ ಬಿಡುಗಡೆ ಮಾಡುವಂತೆ ಕೋರಿ ನಮ್ಮ ಮನೆಗೆ ಬರುತ್ತಿದ್ದಾರೆ. ಇದನ್ನು ಸಿಎಂ ಗಮನಕ್ಕೆ ತಂದಿದ್ದು, ಪರಿಶೀಲನೆ ಮಾಡುತ್ತೇವೆ ಎಂದು ಭರವಸೆ ನೀಡಿದ್ದಾರೆ" ಎಂದರು.
ಸಚಿವರು ಕ್ಷೇತ್ರವಾರು ಸಂಚರಿಸಿ: ಸಚಿವರು ಜಿಲ್ಲಾ ಭೇಟಿ ವೇಳೆ ಜಿಲ್ಲಾ ಕೇಂದ್ರದಲ್ಲೇ ಉಳಿಯಬಾರದು. ಕ್ಷೇತ್ರವಾರು ಸಂಚಾರ ನಡೆಸಿ ಸಮಸ್ಯೆ ಆಲಿಸಬೇಕು ಎಂದು ಶಾಸಕರು ಸಲಹೆ ನೀಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ಶರಣಬಸಪ್ಪ ದರ್ಶನಾಪುರ, ತಾಲೂಕು ಕೆಡಿಪಿ ಸಭೆಯಲ್ಲಿ ಉಸ್ತುವಾರಿ ಸಚಿವರು ಪಾಲ್ಗೊಳ್ಳುವಂತೆ ಚರ್ಚೆಯಾಗಿದೆ. ಸಚಿವರು ಜಿಲ್ಲೆಗೆ ಭೇಟಿ ನೀಡಿದರೆ ಕ್ಷೇತ್ರಗಳಲ್ಲಿ ಸಂಚಾರ ನಡೆಸಬೇಕು ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಉಸ್ತುವಾರಿ ಸಚಿವರಿಗೆ ಸಮನ್ವಯ ಸಾಧಿಸಲು ಸೂಚನೆ: "ಉಸ್ತುವಾರಿ ಸಚಿವರು ಜಿಲ್ಲಾ ಶಾಸಕರ ಸಮಸ್ಯೆ ಆಲಿಸಿ, ಅವರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿದ್ದಾರೆ. ಅಗತ್ಯ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಉಸ್ತುವಾರಿ ಸಚಿವರು ಜಿಲ್ಲೆ ಸಮಸ್ಯೆಗಳನ್ನು ಆಲಿಸಬೇಕು. ಶಾಸಕರ ಜೊತೆ ಸಮನ್ವಯತೆ ಸಾಧಿಸಬೇಕು ಎಂದು ಸಿಎಂ ಸೂಚನೆ ನೀಡಿದ್ದಾರೆ" ಎಂದು ಮೊಳಕಾಲ್ಮೂರು ಶಾಸಕ ಎನ್.ವೈ.ಗೋಪಾಲಾಕೃಷ್ಣ ತಿಳಿಸಿದರು.
ಕ್ಷೇತ್ರಾಭಿವೃದ್ಧಿ ಬಗ್ಗೆ ಚರ್ಚೆ: ''ನಾವೆಲ್ಲರೂ ಜಿಲ್ಲೆಯಲ್ಲಿ ಒಗ್ಗಟ್ಟಿನಲ್ಲಿದ್ದೇವೆ. ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದ್ದೇವೆ. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಸಂಬಂಧ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ'' ಎಂದು ಚಿತ್ರದುರ್ಗ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು. "ನನ್ನ ಸಂಬಂಧ ಯಾರೂ ಅಸಮಾಧಾನದ ಪತ್ರ ಬರೆದಿಲ್ಲ. ನಾವು ಐದೂ ಜನ ಜಿಲ್ಲೆಯ ಕೈ ಶಾಸಕರು ಒಗ್ಗಟ್ಟಾಗಿದ್ದೇವೆ. ಐದೂ ಜನರ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದೇವೆ. ಈ ಬಜೆಟ್ನಲ್ಲಿ ಎಷ್ಟು ಅನುದಾನ ಕೊಡಬೇಕೋ ಅಷ್ಟು ಕೊಟ್ಟಿದ್ದಾರೆ. ಮುಂದಿನ ಬಜೆಟ್ನಲ್ಲಿ ಹೆಚ್ಚಿನ ಅನುದಾನ ಕೊಡುವುದಾಗಿ ಸಿಎಂ ತಿಳಿಸಿದ್ದಾರೆ'' ಎಂದರು.
ಅಸಮಾಧಾನಕ್ಕೆ ಮದ್ದು: ಕೆಲವು ಶಾಸಕರು ಉಸ್ತುವಾರಿ ಸಚಿವರು ಹಾಗೂ ಸಚಿವರುಗಳು ಸರಿಯಾಗಿ ಸ್ಪಂದಿಸದೇ ಇರುವ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದಾರೆ. ಅನುದಾನ ಬಿಡುಗಡೆ ಮಾಡುವ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಾಯಿತು. ಶಾಸಕರು ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದರು. ಈ ವರ್ಷ ಹೆಚ್ಚುವರಿ ಅನುದಾನ ಕೇಳಬೇಡಿ. ಅತ್ಯಗತ್ಯ ಅನುದಾನ ಬಿಡುಗಡೆ ಮಾಡುತ್ತೇವೆ. ಮುಂದಿನ ವರ್ಷದಿಂದ ಹೆಚ್ಚಿನ ಬಜೆಟ್ ನೀಡುವುದಾಗಿ ಸಿಎಂ ಶಾಸಕರಿಗೆ ಭರವಸೆ ನೀಡಿದರು. ಏನೇ ಸಮಸ್ಯೆಗಳಿದ್ದರೆ ಉಸ್ತುವಾರಿ ಸಚಿವರ ಗಮನಕ್ಕೆ ತನ್ನಿ ಎಂದು ಸಿಎಂ ಸಿದ್ದರಾಮಯ್ಯ ಶಾಸಕರುಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಲಂಚದ ಆರೋಪ ಕುರಿತು ರಾಜ್ಯಪಾಲರಿಗೆ ದೂರು.. ಕೃಷಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ