ಬೆಂಗಳೂರು: ಕಾವೇರಿ ನದಿ ನೀರು ಬಿಡುಗಡೆಗೆ ಸೂಚಿಸಿರುವ ಹಿನ್ನೆಲೆ ಇಂದು (ಬುಧವಾರ) ರಾಜ್ಯ ಸರ್ಕಾರ ತುರ್ತು ಸರ್ವಪಕ್ಷ ಸಭೆ ಕರೆದಿದೆ. ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರನ್ನು ಬಿಡುವಂತೆ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಸೂಚಿಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಧ್ಯಾಹ್ನ 12:30ಕ್ಕೆ ವಿಶೇಷ ತುರ್ತು ಸಭೆ ನಡೆಯಲಿದೆ.
ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯ ಸಚಿವರು, ಎಲ್ಲಾ ಪಕ್ಷಗಳ ಮಾಜಿ ಮುಖ್ಯಮಂತ್ರಿಗಳು, ರಾಜ್ಯ ಸಚಿವ ಸಂಪುಟದ ಹಿರಿಯ ಸಚಿವರು, ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಸಭೆಗೆ ಕರೆಯಲಾಗಿದೆ. ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿಯು ತಮಿಳುನಾಡಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅನುಸರಿಸಬೇಕಾದ ಮುಂದಿನ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಮಂಗಳವಾರ ಸಂಜೆ ತುರ್ತು ಸಭೆ ನಡೆಯಿತು.
ವಿಧಾನಸೌಧದ ಮುಖ್ಯಮಂತ್ರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಸಚಿವ ಚಲುವರಾಯ ಸ್ವಾಮಿ, ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ.ಮಹದೇವಪ್ಪ, ನಾಗೇಂದ್ರ , ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ, ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಎಸಿಎಸ್ ರಜನೀಶ್ ಗೋಯಲ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್ ಸೇರಿ ಸಂಬಂಧಪಟ್ಟ ಹಲವು ಅಧಿಕಾರಿಗಳು ಭಾಗವಹಿಸಿದ್ದರು.
ಸರ್ವಪಕ್ಷ ಸಭೆಯಲ್ಲಿ ಕಾವೇರಿ ನದಿ ನೀರು ನಿಯಂತ್ರಣಾ ಸಮಿತಿ ಶಿಫಾರಸಿನಂತೆ ನೀರು ಬಿಡಬೇಕೇ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಈ ಸಂಬಂಧ ಎಲ್ಲಾ ಜಲಾನಯನ ಪ್ರದೇಶಗಳ ಜನಪ್ರತಿನಿಧಿಗಳ ಸಲಹೆ ಸಂಗ್ರಹಿಸಲಾಗುವುದು. ಬಳಿಕ ಯಾವ ರೀತಿ ತೀರ್ಮಾನ ಮಾಡಬೇಕು ಎಂಬ ಬಗ್ಗೆ ಚರ್ಚಿಸಲಾಗುವುದು.
ನಮಗೆ ನೀರು ಬಿಡಲು ಸಾಧ್ಯವಿಲ್ಲ ಎಂಬುದನ್ನು ಸಿಎಂ ಹಾಗೂ ನಮ್ಮ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಆದರೆ ಸಮಿತಿ 5 ಸಾವಿರ ಕ್ಯುಸೆಕ್ ನೀರು ಬಿಡಲು ಸೂಚಿಸಿದೆ. ಆದರೆ ಸದ್ಯಕ್ಕೆ ನಮ್ಮ ಬಳಿ ನೀರಿಲ್ಲ. ಬುಧವಾರ ನಡೆಯುವ ಮಲ್ಪಟ್ಟದ ಸಮಿತಿ ಸಭೆಯಲ್ಲಿ ಏನು ಪ್ರಸ್ತಾಪ ಮಾಡಬೇಕು ಎಂಬುದರ ಬಗ್ಗೆ ದೆಹಲಿಯಲ್ಲಿನ ನಮ್ಮ ಕಾನೂನು ತಜ್ಞರ ಜೊತೆ ಚರ್ಚೆ ನಡೆಸುತ್ತೇನೆ. ವಾಸ್ತವಾಂಶವನ್ನು ಅವರಿಗೆ ತಿಳಿಸುತ್ತೇನೆ. ಕುಡಿಯುವ ನೀರನ್ನು ನಾವು ಉಳಿಸಲೇ ಬೇಕಾಗಿದೆ ಎಂದು ಡಿಸಿಎಂ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಈಗಾಗಲೇ ತಿಳಿಸಿದ್ದಾರೆ.
ಮೊದಲು ಕುಡಿಯುವ ನೀರು ಮುಖ್ಯ. ನಾನು ಅವರಿಗೆ ಬಹಳ ಕಷ್ಟ ಆಗುತ್ತೆ ಎಂದು ಮನವಿ ಮಾಡುತ್ತೇವೆ. ಜನ ನಮಗೆ ಸಹಕಾರ ನೀಡಬೇಕು. ಪ್ರತಿಪಕ್ಷಗಳು ರಾಜ್ಯದ ಹಿತಕ್ಕಾಗಿ ಸಹಕಾರ ಕೊಡಬೇಕು ಎಂದು ಡಿಸಿಎಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Cauvery water dispute: 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಪ್ರಾಧಿಕಾರ ಹೇಳಿದೆ, ಆದರೆ ನಮ್ಮ ಬಳಿ ನೀರಿಲ್ಲ: ಡಿಕೆಶಿ