ಬೆಂಗಳೂರು : ರಾಜ್ಯದಲ್ಲಿ ಕೋವಿಡ್ ನಿರ್ವಹಣೆ ಜವಾಬ್ದಾರಿ ಹೊತ್ತಿರುವ ಪಂಚ ಸಚಿವರು ತಮ್ಮ ತಮ್ಮ ಹೊಣೆಗಾರಿಕೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಪ್ರತಿ ದಿನ ಅಪ್‌ಡೇಟ್‌ಗಳನ್ನು ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿಗಳು ಇಂದು ತಮ್ಮ ಸರ್ಕಾರಿ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಕೋವಿಡ್ -19 ನಿಯಂತ್ರಣದ ಕುರಿತು ಚರ್ಚೆ ನಡೆಸಿದರು.
ಕೋವಿಡ್ -19 ನಿಯಂತ್ರಿಸಲು ಸಚಿವರುಗಳಿಗೆ ನೀಡಿರುವ ಜವಾಬ್ದಾರಿಯ ಅನುಸಾರ ಎಲ್ಲಿಯೂ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಪ್ರಮುಖವಾಗಿ ಆಕ್ಸಿಜನ್ ಕೊರತೆ ನೀಗಿಸುವತ್ತ ಹೆಚ್ಚಿನ ಗಮನ ಹರಿಸುವುದು, ತುರ್ತು ಅಗತ್ಯವಿರುವ ರೋಗಿಗಳಿಗೆ ಬೆಡ್ ಹಂಚಿಕೆಗೆ ಕ್ರಮವಹಿಸುವುದು ಮತ್ತು ರೆಮಿಡಿಸಿವಿಯರ್ ಡ್ರಗ್ ಪೂರೈಕೆಯನ್ನು ಅಗತ್ಯಕ್ಕನುಸಾರವಾಗಿ ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚಿಸಿದರು.
ಅಲ್ಲದೆ ಆಕ್ಸಿಜನ್, ರೆಮಿಡಿಸಿವಿಯರ್ ಹಾಗೂ ಬೆಡ್ ಸೇರಿದಂತೆ ಇತರೆ ವಿಷಯಗಳಲ್ಲಿ ಅಕ್ರಮ ಉಂಟಾದರೆ ಕೂಡಲೇ ಕ್ರಮ ಕೊಗೊಳ್ಳಲು ಆದೇಶಿಸಿದರು. ಇದರ ಜೊತೆ ಪ್ರತಿದಿನ ಎಲ್ಲದರ ಬಗ್ಗೆ ಮಾಹಿತಿ ನೀಡಬೇಕು ಅಂತ ಸೂಚಿಸಿದರು.
ಸಭೆಯಲ್ಲಿ ಡಿಸಿಎಂ ಅಶ್ವತ್ಥ್ ನಾರಾಯಣ್, ಸಚಿವರಾದ ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಸುಧಾಕರ್, ಆರ್.ಅಶೋಕ್, ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಅಧಿಕಾರಿಗಳು ಭಾಗಿಯಾಗಿದ್ದರು.