ಬೆಂಗಳೂರು: ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಾಲ್ಗೊಳ್ಳಲಿರುವ ಬೆಂಗಳೂರಿನ ಕಾರ್ಯಕ್ರಮಗಳು ರದ್ದಾಗಿಲ್ಲ. ಎಂದಿನಂತೆ ನಿಗದಿಯಾಗಿರುವ ಪೂರ್ವ ನಿಯೋಜಿತ ಕಾರ್ಯಕ್ರಮಗಳಿಗೆ ಸಿಎಂ ತೆರಳಲಿದ್ದಾರೆ ಎಂದು ಸಿಎಂ ಕಚೇರಿ ಸ್ಪಷ್ಟಪಡಿಸಿದೆ.
ಬಿಬಿಎಂಪಿ ಆಯೋಜಿಸಿರುವ ಸ್ಮಾರ್ಟ್ ಸಿಟಿ ಯೋಜನೆಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಸಿಎಂ ತೆರಳಲಿದ್ದು, ಚಾಮರಾಜಪೇಟೆಯ ಅಮರ ಸುಳ್ಯ ಸಮರ ವಿಚಾರ ಸಂಕಿರಣ ಕಾರ್ಯಕ್ರಮದಲ್ಲೂ ಭಾಗಿಯಾಗಲಿದ್ದಾರೆ.
ಆದರೆ ಪೂರ್ವ ನಿಗದಿಯಾಗಿರುವ ಮಂಡ್ಯ ಜಿಲ್ಲೆ ಕೆ.ಆರ್ ಪೇಟೆ ಪ್ರವಾಸದ ಬಗ್ಗೆ ಸಿಎಂ ಇನ್ನೂ ನಿರ್ಧಾರ ಮಾಡಿಲ್ಲ. ಅಯೋಧ್ಯೆ ತೀರ್ಪು ನೋಡಿಕೊಂಡು ಮಂಡ್ಯ ಪ್ರವಾಸದ ಬಗ್ಗೆ ತೀರ್ಮಾನ ಕೈಗೊಳ್ಳಲಿರುವ ಸಿಎಂ, ಸದ್ಯ ಬೆಂಗಳೂರಿನ ಡಾಲರ್ಸ್ ಕಾಲೋನಿಯ ನಿವಾಸದಲ್ಲಿದ್ದಾರೆ.