ಬೆಂಗಳೂರು: ಸುಡಾನ್‌ನಲ್ಲಿ ಅನ್ನ ಆಹಾರ ಇಲ್ಲದೇ ಸಂಕಷ್ಟದಲ್ಲಿರುವ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರ ರಕ್ಷಣೆಗೆ ಧಾವಿಸದ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ನಮಗೆ ತಿನ್ನುವುದಕ್ಕೆ ಏನೂ ಇಲ್ಲ, ನಿಮಗೆ ಏನು ಮಾಡಲಿಕ್ಕೆ ಸಾಧ್ಯ? ನೀವು ಇರುವ ಸ್ಥಳದಲ್ಲಿಯೇ ಬಾಗಿಲು ಹಾಕಿಕೊಂಡು ಇರಿ" ಇದು ಕಷ್ಟದಲ್ಲಿರುವ ನಮ್ಮ ಕನ್ನಡಿಗರ ಗೋಳಿಗೆ ಸುಡಾನ್‌ನ ರಾಯಭಾರ ಕಚೇರಿಯ ಪ್ರತಿಕ್ರಿಯೆ. ವಿದೇಶಾಂಗ ವ್ಯವಹಾರಗಳ ಸಚಿವರಾದ ಜೈಶಂಕರ್ ಅವರೇ ಇದನ್ನು ಕೇಳಿ ಗಾಬರಿಯಾಗಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಸುಡಾನ್‌ನಲ್ಲಿ ಕಳೆದ 8-10 ದಿನಗಳಿಂದ ನಮ್ಮ ಕನ್ನಡಿಗ ಹಕ್ಕಿಪಿಕ್ಕಿ ಜನಾಂಗದವರು ತಿನ್ನಲು ಅನ್ನ ಇಲ್ಲದೇ ಕುಡಿಯಲು ನೀರಿಲ್ಲದೆ ನರಳಾಡುತ್ತಿದ್ದಾರೆ. ನಮ್ಮ ವಿಶ್ವಗುರು ಪ್ರಧಾನಿ ನರೇಂದ್ರ ಮೋದಿ ಅವರು ಸೂಚನೆ -ಭರವಸೆಗಳಲ್ಲಿ ಕಾಲಕಳೆಯುತ್ತಿದ್ದಾರೆ. ಕನ್ನಡಿಗರ ರಕ್ಷಣೆಗೆ ಯಾರಿದ್ದಾರೆ? ಎಂದು ಕೇಳಿದ್ದಾರೆ.
ಮುಖ್ಯಮಂತ್ರಿಗಳೇ, ನಿಮ್ಮ ಚುನಾವಣೆಯ ಬುರುಡೆ ಭಾಷಣಗಳ ಮಧ್ಯೆ ಬಿಡುವಾದರೆ ಸುಡಾನ್‌ನಲ್ಲಿ ಕಷ್ಟದಲ್ಲಿರುವ ಕನ್ನಡಿಗರ ಕಡೆ ಗಮನ ಕೊಡಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಸಚಿವ ಈಶ್ವರಪ್ಪನವರಿಗೆ ಫೋನ್ ಮಾಡಲು ಇರುವಷ್ಟು ಪುರುಸೊತ್ತು ಕನ್ನಡಿಗರ ರಕ್ಷಣೆಗೆ ಇಲ್ಲವೇ? ಎಂದು ಮೋದಿಗೆ ಮಾತಿನಲ್ಲೇ ಸಿದ್ದರಾಮಯ್ಯ ತಿವಿದಿದ್ದಾರೆ.
ಮೂರ್ನಾಲ್ಕು ದಿನಗಳ ಹಿಂದೆ ಸುಡಾನ್ ನಲ್ಲಿ ಸಿಲುಕಿರುವ ಹಕ್ಕಿಪಿಕ್ಕಿ ಜನರ ರಕ್ಷಣೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಕೇಂದ್ರ ವಿದೇಶಾಂಗ ಸಚಿವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದರು. ಅಲ್ಲಿನ ಪರಿಸ್ಥಿತಿ ತುಂಬಾ ಚಿಂತಾ ಜನಕವಾಗಿದ್ದು ಆದಷ್ಟು ಬೇಗ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಆದರೆ ಇದುವರೆಗೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂಓದಿ:ಪ್ರಾರ್ಥನೆ ಮುಗಿದ ಕೆಲವೇ ನಿಮಿಷದಲ್ಲಿ ಧರೆಗುರುಳಿದ ಬೃಹತ್ ಆಲದ ಮರ! ತಪ್ಪಿದ ಅನಾಹುತ