ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಸಂಗ್ರಹವಾದ ಹಣವನ್ನು ಏನು ಮಾಡಲಾಗುತ್ತಿದೆ ಎನ್ನುವ ಚರ್ಚೆ ಆರಂಭಗೊಂಡ ಬೆನ್ನಲ್ಲೇ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿಗೆ ಸಲ್ಲಿಕೆಯಾಗಿರುವ ದೇಣಿಗೆಯ ಖರ್ಚು ವೆಚ್ಚದ ವಿವರವನ್ನು ಮುಖ್ಯಮಂತ್ರಿಗಳ ಕಚೇರಿ ಬಿಡುಗಡೆಗೊಳಿಸಿದೆ.
ವಿಶ್ವದಲ್ಲಿ ಮಾರಕವಾಗಿ ಹರಡುತ್ತಿರುವ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಮತ್ತು ರೋಗಕ್ಕೆ ಒಳಗಾಗಿರುವ ಅವರಿಗೆ ಅಗತ್ಯ ಚಿಕಿತ್ಸೆಯನ್ನು ಕಲ್ಪಿಸಲು ಸರ್ಕಾರದೊಂದಿಗೆ ಸಾರ್ವಜನಿಕರು ಸಂಘ ಸಂಸ್ಥೆಗಳು ಕೈಜೋಡಿಸಬೇಕೆಂದು ಮಾಡಲಾದ ಮನವಿಗೆ ಅಭೂತಪೂರ್ವವಾಗಿ ಸ್ಪಂದಿಸಿ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ ಖಾತೆಗೆ 299.50 ಕೋಟಿ ರೂ. ಗಳನ್ನು ಮತ್ತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಖಾತೆಗೆ 35 ಕೋಟಿ ರೂ. ಸೇರಿ ಒಟ್ಟು 334.50 ಕೋಟಿ ರೂ. ಗಳನ್ನು ದೇಣಿಗೆಯಾಗಿ ಸಲ್ಲಿಕೆಯಾಗಿದೆ ಎಂದು ಈವರೆಗೂ ಸಂಗ್ರಹವಾದ ಮೊತ್ತದ ವಿವರವನ್ನು ಸಿಎಂ ಕಚೇರಿ ನೀಡಿದೆ.
ಈ ದೇಣಿಗೆಯ ಮೊತ್ತವನ್ನು ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಅಗತ್ಯ ಮತ್ತು ತುರ್ತು ಸೇವೆಗಳಿಗಾಗಿ ಉಪಯೋಗಿಸಲು ಆಪತ್ತು ನಿಧಿಯಾಗಿ ಕಾಯ್ದಿರಿಸಲಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.
ಅದರಂತೆ ಅತ್ಯಾವಶ್ಯಕವಾಗಿರುವ ಆಕ್ಸಿಜನ್ ಪೂರೈಸಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಆಸ್ಪತ್ರೆಗಳಿಗೆ ಮೆಡಿಕಲ್ ಗ್ಯಾಸ್ ಪೈಪ್ ಲೈನ್ ಜೊತೆಗೆ ಹೈ ಫ್ಲೋ ಆಕ್ಸಿಜನ್ ಸಿಸ್ಟಮ್ ಅನ್ನು ಅಳವಡಿಸುವ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಸಲ್ಲಿಕೆಯಾದ ಪ್ರಸ್ತಾವನೆಗೆ ಮುಖ್ಯಮಂತ್ರಿಗಳ ಕೋವಿಡ್-19 ಪರಿಹಾರ ನಿಧಿ ಖಾತೆಯಲ್ಲಿ ಸಂಗ್ರಹಗೊಂಡಿರುವ ಮೊತ್ತದಿಂದ 109.10 ಕೋಟಿ ರೂ ಹಾಗೂ ಅದೇ ರೀತಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಸಲುವಾಗಿ ಕಾರ್ಪೊರೇಟ್ ಮತ್ತು ಕೈಗಾರಿಕಾ ಉದ್ಯಮಿಗಳು ಸಿಎಸ್ಆರ್ ನಿಧಿಯನ್ನು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕ್ಕೆ ಸಲ್ಲಿಸಿರುವ ಮೊತ್ತದಲ್ಲಿ ವೆಂಟಿಲೇಟರ್, ಬಿ1-ಪಿಎಪಿ-ಆರ್‌ಎನ್ಎ ಎಕ್ಸ್ ಟ್ರಾಕ್ಷನ್ ಉಪಕರಣ ಮತ್ತು ಇತರೆ ಖರೀದಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 31,62,66,280 ರೂಪಾಯಿಗಳನ್ನು ನೀಡಲಾಗಿದೆ ಎಂದು ಹಣ ವಿನಿಯೋಗದ ಮಾಹಿತಿಯನ್ನು ಬಹಿರಂಗಪಡಿಸಿದೆ.