ಬೆಂಗಳೂರು: ಹೋಂ ಕ್ವಾರಂಟೈನ್ನಲ್ಲಿದ್ದರೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸಕ್ಕೆ ಪ್ರಮುಖರನ್ನು ಕರೆಸಿಕೊಂಡು ಬೆಂಗಳೂರಿನಲ್ಲಿ ಕೋವಿಡ್-19 ನಿಯಂತ್ರಣ ಕುರಿತು ಚರ್ಚೆ ನಡೆಸಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ಮೇರೆಗೆ ಕಂದಾಯ ಸಚಿವ ಆರ್.ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ್, ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್, ರಾಜೇಂದ್ರ ಕುಮಾರ್ ಕಠಾರಿಯಾ ಸೇರಿದಂತೆ ಇತರೆ ಅಧಿಕಾರಿಗಳು ಸಿಎಂ ನಿವಾಸ ಕಾವೇರಿಗೆ ಆಗಮಿಸಿದರು.
ಕಾವೇರಿ ಆವರಣದ ಲಾನ್ನಲ್ಲಿ ಸಾಮಾಜಿಕ ಅಂತರದೊಂದಿಗೆ ವ್ಯವಸ್ಥೆ ಮಾಡಲಾಗಿದ್ದ ಆಸನದಲ್ಲಿ ಕುಳಿತು ಬೆಂಗಳೂರು ಕೋವಿಡ್ ಸ್ಥಿತಿಗತಿ ಕುರಿತ ಚರ್ಚೆಯಲ್ಲಿ ಭಾಗಿಯಾಗಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಸಮಗ್ರ ಮಾಹಿತಿ ನೀಡಿದರು. ದಿನೇ ದಿನೆ ಮಹಾನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ ಹಾಗೂ ಇದನ್ನು ತಡೆಯಲು ಕೈಗೊಳ್ಳಬೇಕಿರುವ ಮಾರ್ಗದ ಕುರಿತು ಅಭಿಪ್ರಾಯ ಸಂಗ್ರಹ ಮಾಡಿದರು.
ಸದ್ಯ ಒಂದು ವಾರ ಬೆಂಗಳೂರು ಲಾಕ್ಡೌನ್ ಮಾಡುತ್ತಿದ್ದು, ಲಾಕ್ಡೌನ್ ಸಮಯದಲ್ಲೇ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಬೇಕಾದ ವ್ಯವಸ್ಥೆ ಕುರಿತು ಸಮಾಲೋಚನೆ ನಡೆಸಲಾಯಿತು.
ಸಿಎಂ ಮಾರ್ಗಸೂಚಿ ಉಲ್ಲಂಘಿಸಿಲ್ಲ:
ಹೋಂ ಕ್ವಾರಂಟೈನ್ನಲ್ಲಿದ್ದರೂ ಸಿಎಂ ಸಭೆ ನಡೆಸಿದ್ದು ಯುಸಿಎಂಆರ್ ನಿಯಮ ಉಲ್ಲಂಘನೆ ಮಾಡಿದಂತಾಗಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿಗಳು ಸೋಂಕಿತರ ಸಂಪರ್ಕಕ್ಕೆ ಬಂದು ಆರೋಗ್ಯ ಇಲಾಖೆ ನಿಯಮಾವಳಿಯಂತೆ ಹೋಂ ಕ್ವಾರಂಟೈನ್ನಲ್ಲಿದ್ದರೆ ಆಗ ಯಾರನ್ನೂ ಭೇಟಿಯಾಗಬಾರದು. ಆದರೆ ಸಿಎಂ ಸೋಂಕಿತರ ಸಂಪರ್ಕಕ್ಕೆ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಸ್ವತಃ ಕ್ವಾರಂಟೈನ್ ಆಗಿದ್ದಾರೆ. ಹಾಗಾಗಿ ಸಾಮಾಜಿಕ ಅಂತರ ನಿಯಮ ಪಾಲಿಸಿ ತುರ್ತು ಸಭೆ ನಡೆಸಿದ್ದಾರೆ. ಇಲ್ಲಿ ನಿಯಮಾವಳಿ ಉಲ್ಲಂಘನೆ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.