ಬೆಂಗಳೂರು: ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಿದರು. ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಸಿಎಂ ಸಭೆ ನಡೆಸಿದರು. ಕಳೆದ ವಾರದಿಂದ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಶುರುವಾಗಿದೆ. ಶೇ. 50ರಷ್ಟು ಆಸನ ಭರ್ತಿಗೆ ಅವಕಾಶ ಇದ್ದು, ಇದನ್ನು ಶೇ.100ಕ್ಕೆ ಹೆಚ್ಚಿಸುವಂತೆ ಸಭೆಯಲ್ಲಿ ನಿರ್ಮಾಪಕರು ಸಿಎಂಗೆ ಒತ್ತಾಯಿಸಿದರು.
ವರಮಹಾಲಕ್ಷ್ಮೀ ಹಬ್ಬಕ್ಕೆ ಸ್ಯಾಂಡಲ್‌ವುಡ್ ದೊಡ್ಡ ಸಿನಿಮಾಗಳ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಕೋವಿಡ್ ಹೆಚ್ಚಳದಿಂದ ಸಿನಿಮಾಗಳಿಗೆ ಬ್ರೇಕ್ ಹಾಕಲು ಸರ್ಕಾರದ ಚಿಂತನೆ ನಡೆಸಿದೆ. ಈ ಕುರಿತಂತೆ ಸರ್ಕಾರ ಮಾಡಿರುವ ಚಿಂತನೆಯನ್ನು ಸಭೆಯಲ್ಲಿ ನಿರ್ಮಾಪಕರ ಸಂಘ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು ಪ್ರಸ್ತಾಪಿಸಿದರು. ಸರ್ಕಾರ ನಮಗೆ ಮುಕ್ತ ಅವಕಾಶ ಒದಗಿಸಿ ನಿರ್ಬಂಧ ಕಡಿಮೆ ಮಾಡಬೇಕೆಂದು ಕೋರಿದರು.
ವಿವೇಕ್ ಪ್ರಕರಣ ಚರ್ಚೆ:
ಈ ವೇಳೆ ಲವ್ ಯೂ ರಚ್ಚು ಸಿನಿಮಾ ಚಿತ್ರೀಕರಣದ ವೇಳೆ ನಡೆದ ಅವಘಡಲ್ಲಿ ಮೃತಪಟ್ಟ ಫೈಟರ್ ವಿವೇಕ್ ದುರ್ಮರಣ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಈ ಕುರಿತಂತೆ ಮುಂದಿನ ದಿನಗಳಲ್ಲಿ ಸೂಕ್ತ ಕಾನೂನು ರಚಿಸುವ ಇಚ್ಛೆಯನ್ನು ಸಿಎಂ ವ್ಯಕ್ತಪಡಿಸಿದ್ದಾರೆ.
ಸಭೆ ಬಳಿಕ ಮಾಧ್ಯಮಗಳೊಂದಿಗೆ ನಿರ್ಮಾಪಕ ಸಾರಾ ಗೋವಿಂದು ಮಾತನಾಡಿ, ನಾವು ಮುಖ್ಯಮಂತ್ರಿಗಳಿಗೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಆಸನ ಭರ್ತಿಗೆ ಅವಕಾಶ ನೀಡುವ ಆದೇಶ ಹೊರಡಿಸುವಂತೆ ಮನವಿ ಮಾಡಿದ್ದೇವೆ. ಇದಕ್ಕೆ ಸಿಎಂ ಬೊಮ್ಮಾಯಿ ಕೂಡ ಸ್ಪಂದಿಸಿದ್ದಾರೆ. ಸಿಎಂ ನಾಳೆ ಮಂಗಳೂರು, ಉಡುಪಿ ಪ್ರವಾಸ ಕೈಗೊಳ್ಳುತ್ತಿದ್ದು, ಗಡಿ ಪ್ರದೇಶಗಳ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.
ಬಳಿಕ ನಿರ್ಮಾಪಕ ಕೆ.ಮಂಜು ಮಾತನಾಡಿ, ಸಿಎಂ ಜೊತೆ ಚಿತ್ರರಂಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ವಿವೇಕ್ ಸಾವು ಪ್ರಕರಣ ಬಗ್ಗೆ ಚರ್ಚೆ ಆಗಿದೆ. ಇಂತಹ ಘಟನೆಗಳಾಗದಂತೆ ತಡೆಯಬೇಕು. ನಾವು ವಾಣಿಜ್ಯ ಮಂಡಳಿಯವರು ನಿಯಮಾವಳಿಗಳ ಬಗ್ಗೆ ಚರ್ಚೆ ಮಾಡ್ತೇವೆ. ನಾವು ನಿಯಮಗಳ ಕರಡನ್ನು ರೂಪಿಸಿ ಸಿಎಂಗೆ ಕೊಡ್ತೇವೆ. ಸರ್ಕಾರ ಪರಿಶೀಲಿಸಿ ಫೈನಲ್ ಮಾಡುತ್ತದೆ.
ಹಾದಿ ಬೀದಿಯಲ್ಲಿ ಹೋಗೋರೆಲ್ಲ ಸಿನಿಮಾ ಮಾಡಕ್ಕಾಗಲ್ಲ. ಹಾದಿ ಬೀದಿಯಲ್ಲಿ ಹೋಗೋರು ಸಿನಿಮಾ ಮಾಡಿದ್ರೆ ಮೊನ್ನೆ ಥರದ ದುರ್ಘಟನೆ ನಡೆಯುತ್ತೆ. ಯಾರು ಸಿನಿಮಾ ಮಾಡಬೇಕು, ಯಾರು ಮಾಡಬಾರದು ಎಂಬ ಕುರಿತು ನಿಯಮಗಳ ಅಗತ್ಯ ಇದೆ ಎಂದು ಆಕ್ರೋಶ ಹೊರ ಹಾಕಿದರು.
ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಂ ಹಾಗೂ ಚಿತ್ರನಟಿ ತಾರಾ ನಿರ್ಮಾಪಕ ಸಾರಾ ಗೋವಿಂದು, ಕೆ.ಮಂಜು, ಎನ್. ಸುರೇಶ್ ಇನ್ನಿತರು ಭಾಗಿಯಾಗಿದ್ದರು.