ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಲಾಕ್ಡೌನ್ ನಡುವೆ ನಾಯಕತ್ವ ಬದಲಾವಣೆ ವಿಷಯ ಮತ್ತೆ ಮುನ್ನಲೆಗೆ ಬಂದಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ಕುತೂಹಲ ಕೆರಳುವಂತೆ ಮಾಡಿದೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಜೊತೆ ಕೆಲ ಕಾಲ ಸಮಾಲೋಚನೆ ನಡೆಸಿದರು. ರಾಜ್ಯದಲ್ಲಿ ಸದ್ದಿಲ್ಲದೆ ನಾಯಕತ್ವ ಬದಲಾವಣೆ ವಿಷಯ ಚರ್ಚೆಗೆ ಬಂದಿದೆ.
ಸಿಎಂ ಪುತ್ರ ವಿಜಯೇಂದ್ರ ಹಾಗೂ ಸಿಎಂ ಆಪ್ತ ಗೃಹ ಸಚಿವ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿ ವರಿಷ್ಠರ ಭೇಟಿ ಮಾಡಿ ಮರಳಿದ ಬೆನ್ನಲ್ಲೇ ಕಟೀಲ್ ಸಿಎಂ ಭೇಟಿ ಮಾಡಿದ್ದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ.
ಮೂಲಗಳ ಪ್ರಕಾರ ಬುಧವಾರ ದೆಹಲಿಗೆ ಬರುವಂತೆ ಯಡಿಯೂರಪ್ಪ ಅವರಿಗೆ ಬುಲಾವ್ ಬಂದಿರಬಹುದು ಎನ್ನುವ ಮಾತುಗಳು ಕೇಳಿ ಬಂದಿವೆ. ಅದಕ್ಕಾಗಿಯೇ ಕಟೀಲ್ ಸಿಎಂ ನಿವಾಸಕ್ಕೆ ದೌಡಾಯಿಸಿದ್ದಾರೆ ಎನ್ನಲಾಗುತ್ತಿದೆ.
ಬೆಳಗ್ಗೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರವಾಣಿ ಕರೆ ಮಾಡಿ ಲಾಕ್ಡೌನ್ ಗಂಭೀರವಾಗಿ ಪರಿಗಣಿಸುವಂತೆ ಸಲಹೆ ನೀಡಿದ್ದ ಕಟೀಲ್, ಈ ಸಂಬಂಧ ಸಂಜೆ ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಕಟೀಲ್ ಭೇಟಿ ಬೆನ್ನಲ್ಲೇ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದ ಸಿಎಂ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಕೆಲಕಾಲ ಮಾತುಕತೆ ನಡೆಸಿದರು. ದೆಹಲಿ ವಿದ್ಯಮಾನದ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ಕೊರೊನಾ ಲಾಕ್ಡೌನ್ ನಡುವೆ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಷಯ ನಿಧಾನವಾಗಿ ಮತ್ತೆ ಮುನ್ನಲೆಗೆ ಬರುತ್ತಿದ್ದು, ಕೊರೊನಾ ನಿಯಂತ್ರಣದ ಮೇಲೆ ಇದು ಯಾವ ರೀತಿ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.