ಬೆಂಗಳೂರು: ರಾಜ್ಯದ 25 ಎ ದರ್ಜೆ ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ʼದೈವ ಸಂಕಲ್ಪ' ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಕಾಶಿಯನ್ನು ಅಭಿವೃದ್ದಿಗೊಳಿಸಿದಂತೆ ರಾಜ್ಯದ ದೇವಸ್ಥಾನಗಳ ಸಮಗ್ರ ಅಭಿವೃದ್ದಿ ಉದ್ದೇಶದೊಂದಿಗೆ ಯೋಜನೆ ಆರಂಭಿಸಲಾಗಿದೆ.
ಗೃಹ ಕಚೇರಿ ಕೃಷ್ಣಾದಲ್ಲಿ ದೈವ ಸಂಕಲ್ಪ ಯೋಜನೆಗೆ ಚಾಲನೆ ನೀಡಲಾಗಿದ್ದು, ಹೆಚ್ಚಿನ ಸಂಖ್ಯೆಯ ಭಕ್ತಾದಿಗಳನ್ನು ಸೆಳೆಯುವ ರಾಜ್ಯದ 25 ದೇವಸ್ಥಾನಗಳ ಸಮಗ್ರ ಅಭಿವೃದ್ದಿಗೆ ಪ್ರತ್ಯೇಕ ಯೋಜನೆ ರೂಪಿಸಲಾಗಿದೆ, ಈ ನಿಟ್ಟಿನಲ್ಲಿ ರಾಜ್ಯದ ಹೆಚ್ಚು ಭಕ್ತರನ್ನು ಸೆಳೆಯುವ 25 ಎ ದರ್ಜೆಯ ದೇವಸ್ಥಾನಗಳನ್ನು ಮೊದಲ ಹಂತದಲ್ಲಿ ಸಮಗ್ರ ಅಭಿವೃದ್ದಿಗೆ ನೀಲಿ ನಕ್ಷೆ ರೂಪಿಸಿ ಯೋಜನೆಗೆ ಚಾಲನೆ ನೀಡಲಾಗಿದೆ.
ಯೋಜನೆ ಕುರಿತು ಮಾತನಾಡಿದ ಮುಜಿರಾಯಿ ಸಚಿವೆ ಶಶಿಕಲಾ ಜೊಲ್ಲೆ, ಇಂದು ಸಿಎಂ ವತಿಯಿಂದ ಹೊಸ ಯೋಜನೆ ಲೋಕಾರ್ಪಣೆ ಮಾಡಲಾಗಿದೆ. ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಮ್(ಐಟಿಎಂಎಸ್) ಯೋಜನೆ ಜಾರಿ ಮಾಡಲಾಗಿದೆ. 1440 ಕೋಟಿ ಹಣದಲ್ಲಿ 25 ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮಾಡುವ ಯೋಜನೆಗೆ ಸಿಎಂ ಚಾಲನೆ ನೀಡಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆಯ ಅಡಿ ಬರುವ ದೇವಸ್ಥಾನಗಳ ಮಾಹಿತಿಯನ್ನು ಬೆರಳತುದಿಯಲ್ಲೇ ಪಡೆಯುವ ಅತ್ಯಾಧುನಿಕ ವ್ಯವಸ್ಥೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಡಿಜಿಟಲ್ ಇಂಡಿಯಾದ ಕನಸು ನನಸಾಗುವತ್ತ ನಮ್ಮ ಇಲಾಖೆಯ ಪ್ರಯತ್ನ ಆರಂಭಿಸಿದೆ, ಮುಜರಾಯಿ ಇಲಾಖೆಯ ದೇವಸ್ಥಾನಗಳ ಸರ್ವತೋಮುಖ ನಿರ್ವಹಣೆಗೆ ಅನುಕೂಲವಾಗುವಂತಹ ಐಟಿಎಂಎಸ್ ವೆಬ್ ಸೈಟ್ ನಿರ್ಮಾಣವನ್ನು ಎನ್‌ಐಸಿ ಚೆನ್ನೈ ಹಾಗೂ ಬೆಂಗಳೂರು ತಂಡದಿಂದ ಮಾಡಲಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ಸಂಸ್ಥೆಗಳಲ್ಲಿ ದೇವಾಲಯದ ಸೇವೆಗಳ ಬಗ್ಗೆ ವಿವರ, ದೇವಾಲಯವಿರುವ ಸ್ಥಳದ ಬಗ್ಗೆ ಮಾಹಿತಿ, ಸ್ಥಿರಾಸ್ತಿಗಳ ವಿವರ, ಆನ್ ಲೈನ್ ಮತ್ತು ಇ-ಸೇವೆಗಳ ಸೌಲಭ್ಯಗಳನ್ನ ಇದು ಹೊಂದಿದೆ ಎಂದು ವಿವರ ನೀಡಿದರು.
ಐಟಿಎಂಎಸ್ ನಲ್ಲಿ ಒಳಗೊಂಡಿರುವ ಮಾಹಿತಿಗಳು:
- ದೇವಸ್ಥಾನದ ಸಾಮಾನ್ಯ ಮಾಹಿತಿ
- ದೇವಾಲಯದಲ್ಲಿರುವ ಮೂರ್ತಿಗಳು ಹಾಗೂ ಪ್ರತಿಮೆಗಳ ಬಗ್ಗೆ ಮಾಹಿತಿ
- ದೇವಸ್ಥಾನಕ್ಕೆ ನೀಡಲಾಗಿರುವ ಭದ್ರತೆಯ ಮಾಹಿತಿ
- ನಾಗರೀಕರಿಗೆ ಆನ್‌ಲೈನ್ ಸೇವೆಗಳು
- ದೇವಸ್ಥಾನದ ಆಸ್ತಿಗಳ ವಿವರ
- ಜಿಐಎಸ್ ಇಂಟಿಗ್ರೇಷನ್
- ಮೊಬೈಲ್ ಆಪ್‌ಗಳ ಇಂಟಿಗ್ರೇಷನ್
- ನಿರ್ಮಾಣ/ಪುನರುಜ್ಜೀವನ ಕಾರ್ಯಗಳ ಮಾಹಿತಿ
- ಅನ್ನದಾನ ವ್ಯವಸ್ಥೆಯ ಮಾಹಿತಿ
- ಡ್ಯಾಷ್ ಬೋರ್ಡ್ ಸೇವೆಗಳು
- ನ್ಯಾಯಾಲಯದಲಿರುವ ಕೇಸ್ ಗಳ ನಿಗಾವಣೆ ವ್ಯವಸ್ಥೆ
- ಟೆಂಡರ್‌ಗಳ ಮಾಹಿತಿ
- ಬಳಕೆದಾರರ ನಿರ್ವಹಣಾ ಸೌಲಭ್ಯ
- ಮಾಸ್ಟರ್ ಮ್ಯಾನೇಜ್‌ಮೆಂಟ್
- ಆಯಾ ಕಾಲದ ಮಾಹಿತಿಗಳು
ಇದನ್ನೂ ಓದಿ: ಕಾರಾಗೃಹಗಳಲ್ಲಿ ಗಾಂಜಾ ಬಳಕೆ ಆರೋಪ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್