ಬೆಂಗಳೂರು : ಬಿಡುವಿಲ್ಲದ ಕಾರ್ಯಕ್ರಮಗಳು, ಸಚಿವ ಸಂಪುಟ ವಿಸ್ತರಣೆ ಸರ್ಕಸ್ನ ಒತ್ತಡದ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಸೋಮಣ್ಣ ಅವರ ಕಚೇರಿ ಉದ್ಘಾಟಿಸಿದರು. ಬಿಜೆಪಿ ರಾಜ್ಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಂತರ ಮಾತನಾಡಿದ ಸಿಎಂ, ಪಕ್ಷದ ಎಲ್ಲಾ ಸಚಿವರು, ಶಾಸಕರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಶಾಸಕರ ಕಚೇರಿ ತೆರೆಯಬೇಕು ಎಂದು ಕರೆ ನೀಡಿದರು. ಶ್ರೀಸಾಮಾನ್ಯನ ಸಮಸ್ಯೆ ಕೇಳಲು ಸೋಮಣ್ಣ ವಿಶೇಷವಾದ ಕಚೇರಿ ಮಾಡಿದ್ದಾರೆ. ಜನ ಬಂದು ಸಮಸ್ಯೆ ಹೇಳಿಕೊಂಡು ಪರಿಹರಿಸಿಕೊಳ್ಳಬಹುದು ಎನ್ನುವುದು ಸೋಮಣ್ಣನವರ ಅಪೇಕ್ಷೆಯಾಗಿದೆ. ಪ್ರತಿಯೊಬ್ಬ ಶಾಸಕ, ಮಂತ್ರಿ ಈ ರೀತಿ ಕಚೇರಿ ತೆರೆಯಬೇಕು ಎನ್ನುವುದಕ್ಕೆ ಸೋಮಣ್ಣ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ ಎಂದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ನಾನು ತುಂಬಾ ಕಾರ್ಯಾಲಯ ಉದ್ಘಾಟನೆ ಮಾಡಿದ್ದೇನೆ. ಆದರೆ, ಇಲ್ಲಿರುವ ಉತ್ಸಾಹ ಅಲ್ಲಿರಲಿಲ್ಲ, ಅತ್ಯಂತ ದೊಡ್ಡ ಕಾರ್ಯಾಲಯ ಇದಾಗಿದೆ. ಕಾರ್ಯಕರ್ತರ ಕೆಲಸ ಮಾಡಲು ಕಾರ್ಯಲಯ ಬೇಕು, ದೇಶದ ಎಲ್ಲಾ ಜಿಲ್ಲೆಗಳಲ್ಲಿ ಇವತ್ತು ಕಾರ್ಯಾಲಯ ಇದೆ. ಪ್ರಧಾನಿ ಮೋದಿಯವರ ಆಶಯದಂತೆ ಈ ಕಾರ್ಯಾಲಯ ನಿರ್ಮಾಣವಾಗಿದೆ. ಕಾರ್ಯಾಲಯ ದೇವಸ್ಥಾನ ಇದ್ದಂತೆ. ಇಲ್ಲಿ ಕಾರ್ಯಕರ್ತರು ಕೆಲ ಹೊತ್ತು ಕುಳಿತು ಹೊದರೆ ಉತ್ಸಾಹ ಸಿಗುತ್ತದೆ, ಸರ್ಕಾರದ ಕೆಲಸವನ್ನು ಪ್ರಚಾರ ಮಾಡಲು ಪ್ರೇರಣೆ ಸಿಗುತ್ತದೆ ಎಂದರು.
ಓದಿ : ರಾಜ್ಯ ಉಸ್ತುವಾರಿ-ಸಿಎಂ ಭೇಟಿ ಅಂತ್ಯ: ಮುಂದುವರಿದ ಸಂಪುಟ ವಿಸ್ತರಣೆ ಕುತೂಹಲ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಒಬ್ಬ ಶಾಸಕ ಹೇಗಿರಬೇಕು ಅನ್ನುವುದಕ್ಕೆ ಸಚಿವ ಸೋಮಣ್ಣ ಮಾದರಿಯಾಗಿದ್ದಾರೆ. ಕಾರ್ಯಕರ್ತರ ಜೊತೆ ಸಂಬಂಧ ಹೇಗಿರಬೇಕು ಎಂದು ಅವರು ತೋರಿಸಿದ್ದಾರೆ. ಈ ಮೂಲಕ ಜನ ನಾಯಕರಾಗಿ ಬೆಳೆದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ಕ್ಷೇತ್ರದ ಜನರ ನಾಡಿ ಮಿಡಿತ ಅರಿತಿದ್ದಾರೆ. ಬಿಜೆಪಿ ಕಚೇರಿ ಎಂದರೆ ಕಾರ್ಯಕರ್ತರ ಆಲಯ, ಅದರ ಮೂಲಕ ಜನರ ಸೇವೆಯಾಗುತ್ತದೆ. ಬೆಂಗಳೂರು ದಕ್ಷಿಣ ಅತ್ಯಂತ ಪವಿತ್ರ ಕ್ಷೇತ್ರ. ಅನಂತ್ ಕುಮಾರ್ ಇಲ್ಲಿ ಸಂಸದರಾಗಿದ್ದರು, ಈಗ ತೇಜಸ್ವಿ ಸೂರ್ಯ ಯುವ ನಾಯಕರಾಗಿ ಬೆಳೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪವಿತ್ರ ಕಾರ್ಯಗಳು ಈ ಕ್ಷೇತ್ರದಲ್ಲಿ ನಡೆಯಲಿವೆ ಎಂದರು.
ಪಕ್ಷ ಸೇರ್ಪಡೆ : ಇದೇ ವೇಳೆ ಸ್ಥಳೀಯ ಕಾಂಗ್ರೆಸ್ ಮಖಂಡರು ಬಿಜೆಪಿ ಸೇರ್ಪಡೆಯಾದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೈ ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಕೊರೊನಾ ನಿಯಮ ಉಲ್ಲಂಘನೆ : ಶಾಸಕರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊರೊನಾ ಮಾರ್ಗಸೂಚಿಯನ್ನು ಸ್ಪಷ್ಟವಾಗಿ ಉಲ್ಲಂಘನೆ ಮಾಡಲಾಗಿತ್ತು. ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜಾತ್ರೆಯ ರೀತಿ ಪಕ್ಷದ ಕಾರ್ಯಕರ್ತರು ನೆರೆದಿದ್ದರು. ಸ್ವತಃ ಸಿಎಂ ಭಾಗಿಯಾಗಿದ್ದ ಕಾರ್ಯಕ್ರಮವಾಗಿದ್ದರೂ, ಅಂತರ ಕಾಯ್ದುಕೊಂಡಿರಲಿಲ್ಲ, ಸರಿಯಾಗಿ ಮಾಸ್ಕ್ ಧರಿಸಿರಲಿಲ್ಲ.