ಬೆಂಗಳೂರು: ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಸಮ್ಮತಿ ಪಡೆದುಕೊಳ್ಳುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಮತ್ತೊಮ್ಮೆ ಹಿನ್ನಡೆಯಾಗಿದ್ದು, ಬರಿಗೈಯಲ್ಲಿ ದೆಹಲಿಯಿಂದ ವಾಪಸ್ಸಾಗುತ್ತಿದ್ದಾರೆ.
ತರಾತುರಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ ನವದೆಹಲಿಗೆ ತೆರಳಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾರನ್ನು ಭೇಟಿ ಮಾಡಿದರು. ಸಚಿವ ಸಂಪುಟ ವಿಸ್ತರಣೆ ಅಗತ್ಯತೆ ಬಗ್ಗೆ ಮನವರಿಕೆ ಮಾಡಿಕೊಟ್ಟ ಸಿಎಂ, ಸರ್ಕಾರ ರಚನೆಗೆ ಕಾರಣರಾದವರಿಗೆ ತಕ್ಷಣವೇ ಸಚಿವ ಸ್ಥಾನ ನೀಡಬೇಕಿರುವ ಅನಿವಾರ್ಯತೆಯನ್ನು ವಿವರಿಸಿದರು. ವಿಸ್ತರಣೆ ಮತ್ತು ಪುನಾರಚನೆಯ ಎರಡೂ ಆಯ್ಕೆಗೂ ಸಿದ್ದವಾಗಿರುವುದಾಗಿ ನಡ್ಡಾಗೆ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ಮನವಿಯನ್ನು ಆಲಿಸಿದ ಜೆ.ಪಿ ನಡ್ಡಾ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎರಡು ಮೂರು ದಿನದಲ್ಲಿ ಸಂದೇಶವನ್ನು ಕಳುಹಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಇಂದೇ ಸಮ್ಮತಿ ಪಡೆಯುವ ನಿರೀಕ್ಷೆಯಲ್ಲಿದ್ದ ಸಿಎಂ ನಿರಾಶೆಯಿಂದ ವಾಪಸ್ಸಾಗುತ್ತಿದ್ದಾರೆ. ಜೆ.ಪಿ ನಡ್ಡಾ ಭೇಟಿ ನಂತರ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಗೆ ಚಿಂತನೆ ನಡೆಸಿದ್ದ ಯಡಿಯೂರಪ್ಪ ನಿರ್ಧಾರ ಬದಲಿಸಿ ನೇರವಾಗಿ ವಿಮಾನ ನಿಲ್ದಾಣಕ್ಕೆ ತೆರಳಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸಂಪುಟ ವಿಸ್ತರಣೆ, ಪುನಾರಚನೆ ಬಗ್ಗೆ ವರಿಷ್ಠರ ನಿರ್ಧಾರ ಬದ್ದನಾಗಿದ್ದೇನೆ. ಇಂದಿನ ಚರ್ಚೆ ವೇಳೆ ವರಿಷ್ಠರು ಉತ್ತಮವಾಗಿ ಸ್ಪಂದಿಸಿದ್ದಾರೆ. ವರಿಷ್ಠರು ಏನು ತೀರ್ಮಾನ ಕೈಗೊಳ್ಳುತ್ತಾರೋ ಗೊತ್ತಿಲ್ಲ ಅವರು ಏನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡೋಣ, ವರಿಷ್ಠರು ನೀಡುವ ನಿರ್ದೇಶನದ ಮೇಲೆ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸುತ್ತೇವೆ. ವರಿಷ್ಠರು ಇನ್ನೂ ಎರಡು ಮೂರು ದಿನದಲ್ಲಿ ಚರ್ಚೆ ಮಾಡಿ ತಿಳಿಸುತ್ತೇವೆ ಎಂದಿದ್ದಾರೆ. ವರಿಷ್ಠರು ಒಪ್ಪಿಗೆ ಕೊಟ್ಟ ಬಳಿಕ ಮುಂದಿನ ಹೆಜ್ಜೆ ಇಡಲಾಗುತ್ತದೆ ಎಂದು ತಿಳಿಸಿದರು.