ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸಿ.ಎಂ.ಇಬ್ರಾಹಿಂ ಅವರು ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ನಗರದ ಶಿವಾನಂದ ವೃತ್ತದ ಸಮೀಪವಿರುವ ಸಿದ್ದರಾಮಯ್ಯ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿದ ಇಬ್ರಾಹಿಂ, ಮಾಜಿ ಸಿಎಂ ಅವರೊಂದಿಗೆ ಸಮಾಲೋಚನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶುಭ ಶುಕ್ರವಾರ, ಎಲ್ಲವೂ ಒಳ್ಳೆಯದಾಗುತ್ತದೆ. ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗೆ ಯಾವ ರೀತಿಯ ಕ್ರಮ ಕೈಗೊಳ್ಳಬೇಕು, ಏನು ಮಾಡಬೇಕು, ಇದರಲ್ಲಿ ನನ್ನ ಪಾತ್ರ ಏನು, ಯಾವ ಯಾವ ಸಮಾಜದವರನ್ನು ಹೇಗೆ ಕರೆದೊಯ್ಯಬೇಕು. ಅಲ್ಪಸಂಖ್ಯಾತರ ಪಾತ್ರವೇನು, ಬಹುಸಂಖ್ಯಾತರ ಪಾತ್ರವೇನು ಎಂಬ ವಿಚಾರವಾಗಿ ಚರ್ಚಿಸಿದ್ದೇವೆ ಎಂದರು.
ಜೆಡಿಎಸ್ಗೆ ಸೇರುವ ವಿಚಾರ ಇಲ್ಲಿ ತೀರ್ಮಾನ ಆಗಿಲ್ಲ. ದೆಹಲಿಯಲ್ಲಿ ತೀರ್ಮಾನ ಆಗುತ್ತದೆ. ಸಮಯ ಸಿಕ್ಕಾಗ ದೆಹಲಿಗೆ ಹೋಗಿ ಬರುತ್ತೇನೆ ಎಂದ ಅವರು, ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಉಂಟಾದ ಗೊಂದಲ ಪರಿಹಾರ ಆಗಲಿದೆ. ಇಲ್ಲಿ ಸಿದ್ದರಾಮಯ್ಯ ಸಣ್ಣ ಸಣ್ಣ ವಿಚಾರಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವುದಿಲ್ಲ ಎಂದರು.
ಓದಿ: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ: ಎಫ್ಐಆರ್ ದಾಖಲಿಸುವ ಬಗ್ಗೆ ಪೊಲೀಸರಲ್ಲೇ ಗೊಂದಲ.!?
ಬಿಜೆಪಿ ನಾಯಕರು ನನ್ನನ್ನು ಭೇಟಿಯಾಗುತ್ತಾರೆ ಎಂದಾಕ್ಷಣ ನಾನು ಬಿಜೆಪಿ ಸೇರುತ್ತೇನೆ ಎಂದು ಅರ್ಥವಲ್ಲ. ಸದ್ಯ ನಾನು ಈಗ ಎಲ್ಲಿದ್ದೇನೆ? ದಿಲ್ಲಿಗೆ ಹೋಗಿ ನಾಯಕರನ್ನು ಭೇಟಿಯಾಗಿ ಬಂದ ನಂತರವೇ ನನ್ನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಿರ್ಧಾರ ಕೈಗೊಳ್ಳುವ ನಾಯಕರ ಪಟ್ಟಿಯಲ್ಲಿ ನಾನಿದ್ದೇನೆ ಇಲ್ಲವೇ ಎನ್ನುವುದನ್ನು ತಿಳಿದುಕೊಳ್ಳಬೇಕಲ್ಲವೇ? ನಾವು ಬಂಡವಾಳವಿಲ್ಲದೇ ರಾಜಕೀಯಕ್ಕೆ ಬಂದವರಲ್ಲ. ನಮಗೆ ಇರುವುದನ್ನು ನಮಗೆ ಕೊಟ್ಟರೆ ಸಾಕು. ನಾನು ಒಂದು ರೂಪಾಯಿ ನೀಡಿ 50 ಪೈಸೆಯನ್ನು ವಾಪಸ್ ಕೇಳುತ್ತಿದ್ದೇನೆ. ಇಲ್ಲಿ ಒಂದು ರೂಪಾಯಿನೂ ಹಾಕದೇ ಎರಡು ರೂಪಾಯಿ ತೆಗೆದುಕೊಂಡು ಹೋಗುವವರಿದ್ದಾರೆ. ಅದನ್ನು ನಾವು ಕೇಳುತ್ತಿದ್ದೇವೆ. ನಾವೇನು ಪುಗಸಟ್ಟೆ ಕೇಳುತ್ತಿದ್ದೇವಾ ಎಂದು ಪ್ರಶ್ನಿಸಿದರು.