ಬೆಂಗಳೂರು : ತುಮಕೂರು ಸಿದ್ದಗಂಗಾ ಮಠ ಹಾಗೂ ಬಾಗಲಕೋಟೆಯ ಮುಧೋಳದ ವಾತ್ಸಲ್ಯಧಾಮ ಆಶ್ರಮದ ಟ್ರಸ್ಟ್ನ ಮುಖ್ಯಸ್ಥೆ ಮೀರಾಬಾಯಿ ಕೊಪ್ಪಿಕರ್ ಅವರಿಗೆ ರಾಜ್ಯ ಸರ್ಕಾರ ನೀಡುವ ಗಾಂಧಿ ಸೇವಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಸ್ವಾತಂತ್ರ್ಯೋತ್ಸವದ 75ನೇ ಅಮೃತ ಮಹೋತ್ಸವ ವರ್ಷಾಚರಣೆ ಹಾಗೂ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆ ಅಂಗವಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಗಾಂಧಿ ಸ್ಮಾರಕ ನಿಧಿ ವತಿಯಿಂದ ನಗರದ ಗಾಂಧಿ ಭವನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.
ಸಿದ್ದಗಂಗಾ ಮಠದ ಪರವಾಗಿ ಮಠದ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ.ಶಿವಪ್ಪ ಹಾಗೂ ಹಿರಿಯ ಗಾಂಧಿವಾದಿ ಶ್ರೀಮತಿ ಮೀರಾತಾಯಿ ಕೊಪ್ಪೀಕರ್ ಅವರ ಪರವಾಗಿ ಮುಧೋಳ ಶಾಸಕರೂ ಆಗಿರುವ ಜಲಸಂಪನ್ಮೂಲ ಸಚಿವ ಗೋವಿಂದ ಎಂ ಕಾರಜೋಳ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಪತ್ರದೊಂದಿಗೆ ಸ್ಮರಣಿಕೆ ಹಾಗೂ 5 ಲಕ್ಷ ರೂ. ಚೆಕ್ ಅನ್ನು ಸಿಎಂ ನೀಡಿ ಗೌರವಿಸಿದರು.
ಸಮಾರಂಭದಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಸಂಸದ ಶಿವಕುಮಾರ್ ಉದಾಸಿ, ಡಾ.ಎಲ್ ಹನುಮಂತಯ್ಯ, ನಿವೃತ್ತ ನ್ಯಾಯಮೂರ್ತಿ ಅಶೋಕ್ ಬಿ ಹಿಂಚಗೇರಿ, ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೆ ಪಿ.ಕೃಷ್ಣ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್, ಆಯುಕ್ತ ಜಿ ಜಗದೀಶ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಷ ಪ್ರಸಾದ ದುರಂತ ಪ್ರಕರಣ: ಜಾಮೀನು ಅರ್ಜಿ ಸಲ್ಲಿಸಿದ 2ನೇ ಆರೋಪಿ ಅಂಬಿಕಾ