ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಂಡಿದ್ದು, ರಾಜ್ಯದ ಸಂಸದರು, ಕಾನೂನು ತಜ್ಞರ ಜೊತೆ ಸಭೆ ನಡೆಸಲಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿ ನೇಮಕಾತಿ ಕುರಿತು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಸೋಮವಾರ ಬೆಳಗ್ಗೆ 7 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನವದೆಹಲಿಗೆ ತೆರಳಿರುವ ಸಿಎಂ, ಬೆಳಗ್ಗೆ 9.40ಕ್ಕೆ ದೆಹಲಿ ತಲುಪಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ರಾಜ್ಯದ ಬಿಜೆಪಿ ಸಂಸದರ ಜೊತೆ ಸಭೆ ನಡೆಸಲಿದ್ದಾರೆ. ಬಜೆಟ್ ಪೂರ್ವದಲ್ಲಿ ವಾಡಿಕೆಯಂತೆ ಔಪಚಾರಿಕ ಸಭೆ ನಡೆಸಲಿದ್ದು, ಈಗಾಗಲೇ ಸಂಸದರಿಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರೂ ಸಭೆಗೆ ಆಗಮಿಸಲಿದ್ದಾರೆ.
ಸೋಮವಾರ ರಾತ್ರಿ ಕರ್ನಾಟಕ ಭವನದಲ್ಲಿ ವಾಸ್ತವ್ಯ ಹೂಡಲಿರುವ ಸಿಎಂ, ಮಂಗಳವಾರ ಬೆಳಗ್ಗೆ 8 ಗಂಟೆಗೆ ಅಂತಾರಾಜ್ಯ ಜಲವ್ಯಾಜ್ಯಗಳ ಕುರಿತು ದೆಹಲಿಯಲ್ಲಿ ನಮ್ಮ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಹಿರಿಯ ವಕೀಲರು, ಕಾನೂನು ತಜ್ಞರ ಜೊತೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮೇಕೆದಾಟು ಯೋಜನೆಗಳ ಕುರಿತು ಚರ್ಚಿಸಲಿದ್ದು, ನದಿ ಜೋಡಣೆ ವಿಷಯದಲ್ಲಿಯೂ ರಾಜ್ಯದ ನಿಲುವು ಯಾವ ರೀತಿ ಇರಬೇಕು ಎಂದು ಸಮಾಲೋಚನೆ ನಡೆಸಲಿದ್ದಾರೆ.
ಇದನ್ನೂ ಓದಿ: ಬ್ರಾಹ್ಮಣ ಎಂಬುದು ಜಾತಿಯಲ್ಲ, ಅದು ಉನ್ನತ ಜೀವನ ವಿಧಾನ: ಬಿಜೆಪಿ ನಾಯಕ ದಿನೇಶ್ ಶರ್ಮಾ
ನಂತರ ವಿವಿಧ ಇಲಾಖೆಗಳ ಅಭಿವೃದ್ಧಿ ಕುರಿತು ಕೇಂದ್ರ ಸಚಿವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದ್ದಾರೆ. ಸದ್ಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭೇಟಿಗೆ ಸಮಯ ನಿಗದಿಯಾಗಿದ್ದು, ಇನ್ನು ಕೆಲ ಸಚಿವರ ಸಮಯ ಇನ್ನಷ್ಟು ನಿಗದಿಯಾಗಬೇಕಿದೆ.
ಇದರ ಜೊತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಭೇಟಿಗೆ ಸಿಎಂ ಸಮಯಾವಕಾಶ ಕೋರಿದ್ದಾರೆ. ಆದ್ರೆ ಇನ್ನು ಸಮಯ ಲಭ್ಯವಾಗಿಲ್ಲ, ಅವಕಾಶ ಸಿಕ್ಕಲ್ಲಿ ಸಚಿವ ಸಂಪುಟ ವಿಸ್ತರಣೆ, ನಿಗಮ ಮಂಡಳಿಗಳ ನೇಮಕಾತಿ ಕುರಿತು ವರಿಷ್ಠರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ. ಬಹುತೇಕ ಸಚಿವ ಸಂಪುಟ ವಿಷಯ ಬಜೆಟ್ ಅಧಿವೇಶನದ ನಂತರ ಕೈಗೆತ್ತಿಕೊಳ್ಳಲು ವರಿಷ್ಠರು ಸೂಚಿಸಲಿದ್ದು, ನಿಗಮ ಮಂಡಳಿ ಕುರಿತು ನಿರ್ಧಾರವಾಗಬಹುದು ಎನ್ನಲಾಗಿದೆ.
ಜಾರಕಿಹೊಳಿ ಲಾಬಿ: ಇನ್ನು ಸಿಡಿ ಪ್ರಕರಣದಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಶಾಸಕ ರಮೇಶ್ ಜಾರಕಿಹೊಳಿ ಈಗ ಮತ್ತೆ ಸಂಪುಟ ಸೇರಲು ಯತ್ನಿಸುತ್ತಿದ್ದಾರೆ. ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು ಆರೋಪ ಮುಕ್ತರಾಗಿದ್ದೇನೆ ಎನ್ನುವ ವಿಷಯವನ್ನಿಟ್ಟು ಸಿಎಂ ಬೊಮ್ಮಾಯಿ ಮೇಲೆ ಒತ್ತಡ ಹೇರುತ್ತಿದ್ದಾರೆ. ಈಗಾಗಲೇ ಎರಡು ಮೂರು ಬಾರಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಈ ಕುರಿತು ಹೈಕಮಾಂಡ್ ಜೊತೆ ಮಾತುಕತೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.