ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಕೂಗು ಕೇಳಿ ಬರುತ್ತಿರುವ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ನೇಮಕದಲ್ಲಿ ಬಾರಿ ಬದಲಾವಣೆ ಮಾಡುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಾಕ್ ನೀಡಿದ್ದಾರೆ.
ಈ ಹಿಂದೆ ತಮ್ಮ ತಮ್ಮ ತವರು ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡಿದ್ದವರಿಗೆ ಈ ಬಾರಿ ನಿರೀಕ್ಷೆ ಹುಸಿಗೊಳಿಸಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಜನವರಿ 28ಕ್ಕೆ 6 ತಿಂಗಳು ಪೂರೈಸುತ್ತಿರುವ ಸಂದರ್ಭದಲ್ಲೇ ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಲಾಗಿದ್ದು, ಎಲ್ಲರಿಗೂ ಬಿಸಿ ತಟ್ಟುವಂತೆ ಬೊಮ್ಮಾಯಿ ಅವರು ಚಾಣಾಕ್ಷತನ ಮೆರೆದಿದ್ದಾರೆ.
ಇಬ್ಬರು ಸಚಿವರಿಗೆ ಯಾವುದೇ ಜಿಲ್ಲೆ ಉಸ್ತುವಾರಿ ಇಲ್ಲ: ಬೆಂಗಳೂರು ನಗರದ ಮೇಲೆ ಹಿಡಿತ ಸಾಧಿಸಲು ಯತ್ನಿಸುತ್ತಿದ್ದ ಸಚಿವರಾದ ಆರ್. ಅಶೋಕ್, ಅಶ್ವತ್ಥನಾರಾಯಣ, ವಿ. ಸೋಮಣ್ಣ ಅವರಿಗೂ ಶಾಕ್ ನೀಡಿರುವ ಸಿಎಂ ನಗರ ಉಸ್ತುವಾರಿಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ. ಕಂದಾಯ ಸಚಿವ ಆರ್. ಅಶೋಕ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರಿಗೆ ಯಾವುದೇ ಜಿಲ್ಲೆಯ ಉಸ್ತುವಾರಿಯನ್ನು ನೀಡದಿರುವುದು ಕುತೂಹಲ ಮೂಡಿಸಿದೆ.
ಇನ್ನು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಪುನಃ ಮೈಸೂರು ಜಿಲ್ಲಾ ಉಸ್ತುವಾರಿ ನೀಡಲಾಗಿದೆ. ಕೆಲವರ ವಿಷಯದಲ್ಲಿ ವರಿಷ್ಠರು ಚಾಪೆ ಕೆಳಗೆ ತೂರಿದರೆ, ಮುಖ್ಯಮಂತ್ರಿಗಳು ರಂಗೋಲಿ ಕೆಳಗೆ ಜಾರುವ ಪ್ರಯತ್ನ ಮಾಡಿದ್ದಾರೆ. ತಮ್ಮ ಆಪ್ತರ ವಿಷಯದಲ್ಲಿ ಅವರು ಹಾಗೆ ನಡೆದುಕೊಂಡಿದ್ದಾರೆ ಎನ್ನುವ ಅನುಮಾನ ಮೂಡಿದೆ.
ಪ್ರಮುಖವಾಗಿ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರಿಗೆ ತವರು ಜಿಲ್ಲೆ ಚಿಕ್ಕಬಳ್ಳಾಪುರದ ಉಸ್ತುವಾರಿ ಬದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಸ್ತುವಾರಿಗೆ ಪಟ್ಟು ಹಿಡಿದಿದ್ದ ಎಂಟಿಬಿ ನಾಗರಾಜ್ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ವಹಿಸಲಾಗಿದೆ.ಇನ್ನು ರಾಜರಾಜೇಶ್ವರಿ ನಗರದ ಮುನಿರತ್ನ ಅವರಿಗೆ ಕೋಲಾರ ಜಿಲ್ಲೆ ಉಸ್ತುವಾರಿ ನೀಡಲಾಗಿದೆ. ಮುನಿರತ್ನ ಕೂಡ ಕೋಲಾರ ಉಸ್ತುವಾರಿ ಬಗ್ಗೆ ತೃಪ್ತಿ ಹೊಂದಿಲ್ಲ ಎನ್ನಲಾಗಿದ್ದು, ಅವರೂ ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದರು ಎಂದು ಹೇಳಲಾಗುತ್ತಿದೆ.
ಆನಂದ್ ಸಿಂಗ್ಗೆ ಕೊಪ್ಪಳ ಜಿಲ್ಲೆ ಉಸ್ತುವಾರಿ: ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಶಿವಮೊಗ್ಗವನ್ನು ತಪ್ಪಿಸಿ ನೆರೆಯ ಚಿಕ್ಕಮಗಳೂರು ಜಿಲ್ಲೆ ಕೊಟ್ಟು ಸಿಟ್ಟು ಶಮನ ಮಾಡುವ ಯತ್ನ ನಡೆಸಲಾಗಿದೆ. ವಿಜಯನಗರ ಜಿಲ್ಲೆ ಅಸ್ತಿತ್ವಕ್ಕೆ ಕಾರಣರಾಗಿದ್ದ ಆನಂದ್ ಸಿಂಗ್ ಅವರಿಗೆ ತವರು ಜಿಲ್ಲೆಯ ಬದಲಾಗಿ ಪಕ್ಕದ ಕೊಪ್ಪಳ ಜಿಲ್ಲೆ ಕೊಡಲಾಗಿದೆ. ಖಾತೆ ಹಂಚಿಕೆ ಬಗ್ಗೆ ಕ್ಯಾತೆ ತೆಗೆದು ಮುಖ್ಯಮಂತ್ರಿ ಮತ್ತು ವರಿಷ್ಟರ ಸಿಟ್ಟಿಗೆ ಗುರಿಯಾಗಿದ್ದ ಸಿಂಗ್ ಅವರಿಗೆ ಈ ರೀತಿ ಟಾಂಗ್ ಕೊಡಲಾಗಿದೆ.
ಉಳಿದಂತೆ ಮೂವರು ಸಚಿವರಿಗೆ ಡಬಲ್ ಧಮಾಕಾ ಸಿಕ್ಕಿದೆ. ಕೆ. ಗೋಪಾಲಯ್ಯ ಅವರಿಗೆ ಹಾಸನ ಜೊತೆಗೆ ಮಂಡ್ಯ ಉಸ್ತುವಾರಿ ಸಿಕ್ಕಿದೆ. ಬಿ.ಸಿ. ಪಾಟೀಲ್ ಅವರಿಗೆ ಚಿತ್ರದುರ್ಗ-ಗದಗ ನೀಡಲಾಗಿದೆ. ಶಂಕರ್ ಪಾಟೀಲ್ ಮುನೇನಕೊಪ್ಪ ಅವರಿಗೆ ರಾಯಚೂರು-ಬೀದರ್ ಜಿಲ್ಲೆಗಳ ಹೊಣೆ ನೀಡಲಾಗಿದೆ. ಇವರು ಎರಡೂ ಜಿಲ್ಲೆಗಳನ್ನು ಹೇಗೆ ನಿಭಾಸಲಿದ್ದಾರೆ ಎಂಬುದು ಚರ್ಚೆಯ ವಿಷಯವಾಗಿದೆ. ಮಂಡ್ಯದ ಕೆ.ಸಿ. ನಾರಾಯಣಗೌಡರಿಗೆ ಶಿವಮೊಗ್ಗ ಕೊಡಲಾಗಿದೆ.
ಅರಗ ಜ್ಞಾನೇಂದ್ರಗೆ ತುಮಕೂರು ಜಿಲ್ಲೆ ಉಸ್ತುವಾರಿ: ಉಳಿದಂತೆ ಮುಖ್ಯಮಂತ್ರಿಗಳು ತಮ್ಮ ತವರು ಜಿಲ್ಲೆ ಉಸ್ತುವಾರಿಯನ್ನು ಉತ್ತರ ಕನ್ನಡ ಜಿಲ್ಲೆಯ ಶಿವರಾಮ್ ಹೆಬ್ಬಾರ್ ಅವರಿಗೆ ವಹಿಸಿದ್ದಾರೆ. ತವರು ಜಿಲ್ಲೆ ತುಮಕೂರು ಉಸ್ತುವಾರಿ ನಿರೀಕ್ಷೆಯಲ್ಲಿದ್ದ ಬಿ.ಸಿ. ನಾಗೇಶ್ ಅವರಿಗೆ ಕೊಡಗು ಜಿಲ್ಲೆ ನೀಡಲಾಗಿದೆ. ಜೆ.ಸಿ. ಮಾಧುಸ್ವಾಮಿ ಅವರಿಗೆ ತುಮಕೂರಷ್ಟೇ ಅಲ್ಲ ಬೇರೆ ಯಾವ ಜಿಲ್ಲೆಯ ಉಸ್ತುವಾರಿಯನ್ನೂ ಕೊಡದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಇತ್ತೀಚೆಗಷ್ಟೇ ಸಂಸದ ಬಸವರಾಜು ಅವರು ಸಚಿವ ಜೆ.ಸಿ. ಮಾಧುಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬರುವ ಚುನಾವಣೆಯಲ್ಲಿ ಇದು ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕಾಗಿ ಬದಲಾವಣೆ ಮಾಡಲಾಗಿದೆ ಎಂಬ ಮಾತು ಕೇಳಿಬಂದಿದೆ. ತುಮಕೂರು ಜಿಲ್ಲೆ ಉಸ್ತುವಾರಿಯನ್ನು ಅರಗ ಜ್ಞಾನೇಂದ್ರ ಅವರಿಗೆ ವಹಿಸಲಾಗಿದೆ.
ಇದನ್ನೂ ಓದಿ: 31 ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕ: ನಿಮ್ಮ ಜಿಲ್ಲೆಗೆ ಯಾರು?..ಇಲ್ಲಿದೆ ಲಿಸ್ಟ್
ರಾಜ್ಯದ ಗಮನಸೆಳೆಯುವ ಗಡಿ ಜಿಲ್ಲೆ ಬೆಳಗಾವಿಯನ್ನು ಜಲಸಂಪನ್ಮೂಲ ಸಚಿವ ಗೋವಿಂದಕಾರಜೋಳ ಹೆಗಲಿಗೆ ನೀಡಿದ್ದಾರೆ. ಈ ಜಿಲ್ಲೆಯಿಂದ ಸಚಿವೆ ಶಶಿಕಲಾ ಜೊಲ್ಲೆ ಇದ್ದರೂ ಉಸ್ತುವಾರಿ ಮಾತ್ರ ಕಾರಜೋಳ ಅವರಿಗೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ರಮೇಶ್ ಜಾರಕಿಹೊಳಿ ಸೇರ್ಪಡೆಯಾದರೂ ಯಾವುದೇ ರೀತಿಯ ತೊಡಕಾಗದಂತೆ ಇಲ್ಲಿಯೂ ಕೂಡ ಎಚ್ಚರಿಕೆ ಹೆಜ್ಜೆ ಇಡಲಾಗಿದೆ. ಜಿಲ್ಲೆ ಬಳ್ಳಾರಿ ನಿರೀಕ್ಷೆಯಂತೆ ಸಾರಿಗೆ ಸಚಿವ ಶ್ರೀರಾಮುಲು ಪಾಲಾಗಿದೆ. ಬೆಂಗಳೂರು ನಗರದ ಮೇಲೆ ಕಣ್ಣಿಟ್ಟಿದ್ದ ವಸತಿ ಸಚಿವ ವಿ. ಸೋಮಣ್ಣನಿಗೆ ಚಾಮರಾಜನಗರ, ಉಮೇಶ್ ಕತ್ತಿಗೆ ವಿಜಯಪುರದ ಉಸ್ತುವಾರಿ ನೀಡಲಾಗಿದೆ.
ಸಚಿವ ಅಶ್ವತ್ಥನಾರಾಯಣಗೆ ಮತ್ತೆ ರಾಮನಗರ ಜಿಲ್ಲೆ ಹೊಣೆಗಾರಿಕೆ: ಇತ್ತೀಚೆಗಷ್ಟೇ ಡಿ.ಕೆ. ಸಹೋದರರ ವಿರುದ್ಧ ಬಹಿರಂಗವಾಗಿ ತೊಡೆಗೊಟ್ಟಿದ್ದ ಸಚಿವ ಅಶ್ವತ್ಥನಾರಾಯಣ ಅವರಿಗೆ ಮತ್ತೆ ರಾಮನಗರ ಜಿಲ್ಲೆ ಹೊಣೆಗಾರಿಕೆ ಕೊಡಲಾಗಿದೆ. ಗದಗ ಜಿಲ್ಲೆಯ ಉಸ್ತುವಾರಿಯಾಗಿದ್ದ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಅವರನ್ನು ಬಾಗಲಕೊಟೆಗೆ ನಿಯೋಜಿಸಲಾಗಿದೆ. ಕೋಟಾ ಶ್ರೀನಿವಾಸ ಪೂಜಾರಿಗೆ ಉತ್ತರ ಕನ್ನಡ ಕೊಡಲಾಗಿದೆ. ತವರು ಜಿಲ್ಲೆಯಿಂದ ಬದಲಾಯಿಸಿರುವುದು ವಿಶೇಷ.
ಬೀದರ್ ಜಿಲ್ಲಾ ಉಸ್ತುವಾರಿಯಾಗಿದ್ದ ಪ್ರಭು ಚವ್ಹಾಣ್‍ಗೆ ಯಾದಗಿರಿ ನೀಡಿದ್ದರೆ, ಸಚಿವ ಮುರುಗೇಶ್ ನಿರಾಣಿ ಅವರಿಗೆ ಪುನಃ ಕಲಬುರಗಿ ಜಿಲ್ಲೆಯ ಉಸ್ತುವಾರಿ ನೀಡಲಾಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‍ಗೆ ಪುನಃ ದಾವಣಗೆರೆ ನೀಡಲಾಗಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಮೇಲೆ, ಸ್ವಾತಂತ್ರ್ಯ ದಿನಾಚರಣೆ ದಿನದಂದು ಧ್ವಜಾರೋಹಣ ಮಾಡಲು, ಆ ನಂತರ ಕೋವಿಡ್ ಪರಿಸ್ಥಿತಿ ನಿಭಾಯಿಸಲು ಮಂತ್ರಿಗಳಿಗೆ ಉಸ್ತುವಾರಿ ನೀಡಿದ್ದರು. ಆದರೆ, ಇದನ್ನೇ ಉಸ್ತುವಾರಿ ಎಂದು ಬಿಂಬಿಸಿಕೊಂಡು ಸರ್ಕಾರ ಸಭೆ, ಕಾರ್ಯಕ್ರಮಗಳನ್ನು ನಡೆಸಿದ್ದರು. ಸದ್ಯಕ್ಕೆ ಅವರ ಬುಡ ಅಲ್ಲಾಡಿಸುವ ಕೆಲಸವನ್ನು ಬಿಜೆಪಿ ಮಾಡಿದೆ. ಈಗ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವುದು ಸೇರಿದಂತೆ ಪೂರ್ಣ ಪ್ರಮಾಣದ ಜಿಲ್ಲಾ ಉಸ್ತುವಾರಿ ಹೊಣೆಯನ್ನು ಸಿಎಂ ಬಸವರಾಜ ಬೊಮ್ಮಾಯಿ ವಹಿಸಿದ್ದಾರೆ. ಕೆಲವು ಸಚಿವರಿಗೆ ಜಿಲ್ಲಾ ಉಸ್ತುವಾರಿ ನೀಡಿರುವುದು ಹಿನ್ನಡೆಯಾದಂತಾಗಿದೆ. ಕೆಲ ಸಚಿವರು ಅಸಮಾಧಾನಗೊಂಡಿದ್ದು, ಇದನ್ನು ಮುಖ್ಯಮಂತ್ರಿಗಳು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.