ಬೆಂಗಳೂರು: ಕೊರೊನಾ ಸೋಂಕಿಗೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಇಂದು ವಿಧಾನಸೌಧದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಜೊತೆ ತುರ್ತು ವಿಡಿಯೋ ಕಾನ್ಫರೆನ್ಸ್ ನಡೆಸಿದರು.
ಕೊರೊನಾ ಸ್ಥಿತಿಗತಿ, ಕ್ರಮಗಳು, ಲಾಕ್ಡೌನ್ ಪರಿಸ್ಥಿತಿ, ಅಗತ್ಯ ವಸ್ತುಗಳ ಪೂರೈಕೆ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದು, ಹಲವು ಕಟ್ಟುನಿಟ್ಟಿನ ಸೂಚನೆ ನೀಡಿದರು. ಪ್ರಧಾನಮಂತ್ರಿ ಅವರ ಸೂಚನೆಯಂತೆ 21 ದಿನಗಳ ಲಾಕ್ಡೌನ್ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಅಂತ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ರು. ಲಾಕ್ಡೌನ್ ಮೀರಿ ಹೊರಬರುವವರನ್ನು ಅರೆಸ್ಟ್ ಮಾಡುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಎಲ್ಲಾ ಜಿಲ್ಲೆಯ ಗಡಿಗಳನ್ನು ಸೀಲ್ ಮಾಡುವಂತೆ ಸೂಚನೆ ನೀಡಿದ್ದಾರೆ.
ವಿಶೇಷವಾಗಿ ಕಾಸರಗೋಡು ಮೂಲಕ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಸೂಚಿಸಿದ್ದಾರೆ. ಇಡೀ ರಾಜ್ಯದಲ್ಲಿ ಖಾಸಗಿ ಕ್ಲಿನಿಕ್ಗಳು ಬಂದ್ ಮಾಡುವ ಹಾಗಿಲ್ಲ. ಕ್ಲಿನಿಕ್ ಬಂದ್ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ದಿನನಿತ್ಯ ಬಳಸುವ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಅದೇ ಏರಿಯಾದಲ್ಲಿ ಮಾತ್ರ ಓಡಾಡಲು ಅವಕಾಶ ಕೊಡಿ. ಬೇರೆ ಏರಿಯಕ್ಕೆ ಹೋಗಿ ಖರೀದಿ ಮಾಡಲು ಅವಕಾಶ ನೀಡದಂತೆ ನಿರ್ದೇಶನ ನೀಡಿದರು. ಜೊತೆಗೆ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್ಗಳನ್ನು ಕೋವಿಡ್-19 ರೋಗಿಗಳಿಗಾಗಿ ಮೀಸಲಿಡುವಂತೆ ಸೂಚಿಸಿದ್ದಾರೆ.
ಇನ್ನು ವೈದ್ಯರು ಮತ್ತು ನರ್ಸ್ಗಳಿಗೆ ತೊಂದರೆ ಕೊಡುವ ಮನೆ ಮಾಲೀಕರಿಗೆ ಎಚ್ಚರಿಕೆ ನೀಡಬೇಕು ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ವಿಡಿಯೋ ಕಾನ್ಫರೆನ್ಸ್ನಲ್ಲಿ ಡಿಸಿಎಂಗಳಾದ ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಸಚಿವರಾದ ಅಶೋಕ್, ಸುರೇಶ್ ಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರು.