ಬೆಂಗಳೂರು: ಕೊರೊನಾ ನಿಯಂತ್ರಣದಲ್ಲಿ ಕರ್ನಾಟಕ ಇಡೀ ದೇಶಕ್ಕೆ ಮಾದರಿಯಾಗಿದ್ದು ಇತರ ರಾಜ್ಯಗಳ ಕರ್ನಾಟಕ ಮಾದರಿಯನ್ನು ಅನುಸರಿಸಿ ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಿರ್ವಹಣೆಯಲ್ಲಿ "ಕರ್ನಾಟಕ ಮಾದರಿ"ಯನ್ನು, ಅನುಸರಿಸುವಂತೆ ಕೇಂದ್ರಸರ್ಕಾರ ರಾಜ್ಯಗಳಿಗೆ ಹೇಳಿದೆ. ನಮ್ಮ ಈ ಅನುಕರಣೀಯ ಮಾದರಿಯ ಹಿಂದೆ ದಕ್ಷ, ಪ್ರಾಮಾಣಿಕ ಆಡಳಿತ, ಪರಿಣಾಮಕಾರಿ ನೀತಿಗಳು ಮತ್ತು ತಂತ್ರಜ್ಞಾನದ ಸದ್ಭಳಕೆ, ನಿಖರ ಅನುಷ್ಠಾನಗಳ ಸಾಂಘಿಕ ಪ್ರಯತ್ನಗಳಿವೆ. ಟೀಮ್ ಕರ್ನಾಟಕ ಮತ್ತು ಎಲ್ಲ ನಮ್ಮ ಕೊರೊನಾ ಯೋಧರಿಗೆ ಅಭಿನಂದನೆಗಳು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.
ಇಂಡಿಯಾ ಫೈಟ್ ಕೊರೊನಾ ಟ್ವಿಟರ್ ಖಾತೆಯಲ್ಲಿ ಕೇಂದ್ರ ಸರ್ಕಾರ ಕರ್ನಾಟಕ ಪ್ರಯತ್ನವನ್ನು ಶ್ಲಾಘಿಸಿದ್ದು ಇತರ ರಾಜ್ಯಗಳು ಕರ್ನಾಟಕವನ್ನು ಅನುಸರಿಸುವಂತೆ ಕರೆ ನೀಡಿದೆ. ಕೋವಿಡ್ 19 ವ್ಯಕ್ತಿಯ ಸಂಪರ್ಕ ಪತ್ತೆ ಮತ್ತು ಸಂಪರ್ಕಿತರ ಪತ್ತೆ ಹಚ್ಚುವುದು, ಮನೆ ಮನೆ ಸರ್ವೇ ಕಾರ್ಯ, ದೂರವಾಣಿ ಮೂಲಕ ಪತ್ತೆ ಕಾರ್ಯವನ್ನು ಕೇಂದ್ರ ಶ್ಲಾಘಿಸಿದೆ.