ಬೆಂಗಳೂರು: ಪೌರತ್ವ ಕಾಯ್ದೆ ವಿರುದ್ಧ ರಾಜ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ನಾಳೆ ನಿಗದಿಯಾಗಿದ್ದ ವಿಡಿಯೋ ಕಾನ್ಪರೆನ್ಸ್ ಅನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರದ್ದುಗೊಳಿಸಿದ್ದಾರೆ.
ನಾಳೆ ಬೆಳಗ್ಗೆ 11 ಗಂಟೆಗೆ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬರ, ನೆರೆ ಪರಿಹಾರ ಕಾಮಗಾರಿ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಕುರಿತು ಸಿಎಂ ಪರಿಶೀಲನೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆಯಲ್ಲಿ ಡಿಸಿಗಳ ಸಭೆ ಬದಲು ಕಾನೂನು ಸುವ್ಯವಸ್ಥೆ ಪರಿಶೀಲನೆಗೆ ಆದ್ಯತೆ ನೀಡಲು ನಿರ್ಧರಿಸಿ ಡಿಸಿಗಳೊಂದಿಗಿನ ವಿಡಿಯೋ ಸಂವಾದವನ್ನು ಸಿಎಂ ರದ್ದುಗೊಳಿಸಿದ್ದಾರೆ.
ನಾಳೆ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲೇ ಉಳಿಯಲಿರುವ ಸಿಎಂ ಬಿಎಸ್ವೈ ಮಧ್ಯಾಹ್ನ 4.30ರ ನಂತರ ವಿವಿಧ ನಿಯೋಗಗಳನ್ನು ಭೇಟಿ ಮಾಡಲಿದ್ದಾರೆ. ಮೂರು ನಿಯೋಗಗಳ ಭೇಟಿ ಬಿಟ್ಟರೆ ಬೇರೆ ಸಭೆ ಅಥವಾ ಪೂರ್ವನಿಯೋಜಿತ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳದೇ ಸಮಯವನ್ನು ಸಿಎಂ ಕಾಯ್ದಿರಿಸಿದ್ದಾರೆ. 144 ಸೆಕ್ಷನ್ ಜಾರಿ ಹಿನ್ನೆಲೆ ಯಾವುದೇ ಸಭೆಗೆ ಮುಂದಾಗದ ಸಿಎಂ ಬಿಎಸ್ವೈ, ಕಾನೂನು ಸುವ್ಯವಸ್ಥೆ ಬಗ್ಗೆ ಬೆಳಗ್ಗೆ ಮತ್ತೊಮ್ಮೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.