ಬೆಂಗಳೂರು: ನಾಯಕತ್ವ ಬದಲಾವಣೆಯ ವಿಚಾರ ಬಲವಾಗಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲೇ ಅಭಿವೃದ್ಧಿ ಕಾರ್ಯಗಳಿಗೆ ವೇಗ ತುಂಬಲು ಮುಂದಾಗಿರುವ ಸಿಎಂ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರು ನಗರ ಪ್ರದಕ್ಷಿಣೆಗೆ ಆರಂಭ ಮಾಡಿದ್ದಾರೆ.
ಬೆಳಗ್ಗೆ 11 ಗಂಟೆಯಿಂದ ಆನಂದ್ ರಾವ್ ವೃತ್ತದಿಂದ ಆರಂಭವಾಗಿರುವ ಸಿಟಿ ರೌಂಡ್ಸ್ ಮಧ್ಯಾಹ್ನ 1.30ರ ವರೆಗೂ ಮುಂದುವರಿಯಲಿದೆ. ನಗರದ ನಾನಾ ಭಾಗಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡಲಿರುವ ಸಿಎಂ, ಗಾಂಧಿನಗರ, ಗೋವಿಂದರಾಜನಗರ, ರಾಜರಾಜೇಶ್ವರಿನಗರ, ಸರ್.ಸಿ.ವಿ. ರಾಮನ್‌ನಗರ, ಶಾಂತಿನಗರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಲಿದ್ದಾರೆ.
ಸಿಎಂ ಬಿಎಸ್ವೈಗೆ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ್‌ನಾರಾಯಣ್, ಸಚಿವರಾದ ಆರ್.ಅಶೋಕ್, ವಿ. ಸೋಮಣ್ಣ, ಬೈರತಿ ಬಸವರಾಜು, ಕೆ.ಗೋಪಾಲಯ್ಯ, ಎಸ್.ಟಿ. ಸೋಮಶೇಖರ್ ಸಾಥ್ ನೀಡಿದ್ದಾರೆ. ನಗರದಲ್ಲಿ ತುಂತುರು ಮಳೆಯಾಗುತ್ತಿದ್ದು, ಮಳೆಯ ನಡುವೆಯೂ ಸಿಎಂ ಬಿಎಸ್ವೈ ನಗರ ಪ್ರದಕ್ಷಿಣೆಯನ್ನು ಆರಂಭ ಮಾಡಿದ್ದಾರೆ.
ಸಿಎಂ ಅವರಿಂದ ನಗರ ಪ್ರದಕ್ಷಿಣೆ ಹಿನ್ನೆಲೆ ರೇಸ್ ಕೋರ್ಸ್ ರಸ್ತೆ, ಕುಮಾರ ಕೃಪ ರಸ್ತೆ, ಶೇಷಾದ್ರಿಪುರಂ ರಸ್ತೆ, ಮೆಜೆಸ್ಟಿಕ್ ಮೊದಲಾದ ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಂ ಉಂಟಾಗಿದೆ.