ಬೆಂಗಳೂರು: ವಿಧಾನಸಭೆ ಅಧಿವೇಶನ, ನೆರೆಹಾನಿ, ಉಪಚುನಾವಣೆ ಹೀಗೆ ಮುಂದೂಡಿಕೆಯಾಗುತ್ತಲೇ ಬಂದಿದ್ದ ಸಚಿವ ಸಂಪುಟ ವಿಸ್ತರಣೆಗೆ ಇದೀಗ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಿರ್ಧರಿಸಿದ್ದು ಹೈಕಮಾಂಡ್ ಬುಲಾವ್ನ ನಿರೀಕ್ಷೆಯಲ್ಲಿದ್ದಾರೆ.
ವಿಧಾನಸಭೆ ಅಧಿವೇಶನಕ್ಕೂ ಮೊದಲೇ ಸಂಪುಟ ವಿಸ್ತರಣೆ ಮಾಡಲು ದೆಹಲಿ ಪ್ರವಾಸ ಕೈಗೊಂಡಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬರಿಗೈಲಿ ವಾಪಸ್ಸಾಗಿದ್ದರು, ವಿವಿಧ ರಾಜ್ಯಗಳ ಚುನಾವಣೆ ಕಾರಣದಿಂದ ಹೈಕಮಾಂಡ್ ನಾಯಕರು ಕರ್ನಾಟಕದ ಬಗ್ಗೆ ಹೆಚ್ಚು ಮಹತ್ವ ಕೊಡಲಿಲ್ಲ, ನಂತರ ಉಪ ಚುನಾವಣೆ ಎದುರಾಯಿತು, ಈಗ ಎಲ್ಲವೂ ಮುಗಿದಿದೆ. ಬಿಹಾರದಲ್ಲಿಯೂ ಗೊಂದಲಕ್ಕೆ ತೆರೆ ಬಿದ್ದಿದ್ದು ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
ಉಪಚುನಾವಣಾ ಫಲಿತಾಂಶದ ನಂತರ ದೆಹಲಿಗೆ ತೆರಳಲು ಯಡಿಯೂರಪ್ಪ ನಿರ್ಧರಿಸಿದ್ದರಾದರೂ ಹೈಕಮಾಂಡ್ ನಾಯಕರು ಭೇಟಿಗೆ ಇನ್ನೂ ಅನುಮತಿ ನೀಡಿಲ್ಲ, ಈಗಾಗಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಸಿಎಂ ಸಂಪುಟ ವಿಸ್ತರಣೆ, ಪುನಾರಚನೆ ಕುರಿತು ಮಾತುಕತೆ ನಡೆಸಲು ಅನುಮತಿ ಕೋರಿದ್ದಾರೆ. ಇದಕ್ಕೆ ಜೆಪಿ ನಡ್ಡಾ ಕೂಡ ಒಪ್ಪಿಗೆ ನೀಡಿದ್ದು ದಿನಾಂಕವನ್ನು ತಿಳಿಸುವುದಾಗಿ ಹೇಳಿದ್ದಾರೆ. ಆದರೆ, ಇನ್ನೂ ಸಿಎಂ ಯಡಿಯೂರಪ್ಪಗೆ ಸಮಯಾವಕಾಶವನ್ನು ನೀಡಿಲ್ಲ. ಹೀಗಾಗಿ, ವರಿಷ್ಠರ ಅನುಮತಿಗಾಗಿ ಸಿಎಂ ಯಡಿಯೂರಪ್ಪ ದೆಹಲಿಯಿಂದ ಬರುವ ದೂರವಾಣಿ ಕರೆ ನಿರೀಕ್ಷೆಯಲ್ಲಿದ್ದಾರೆ.
ಈ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗುತ್ತಲೇ ಇದ್ದು ಅಪೇಕ್ಷೆ ವ್ಯಕ್ತಪಡಿಸಿ ಮನೆ ಬಾಗಿಲಿಗೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗಾಗಲೇ ಎಂಟಿಬಿ ನಾಗರಾಜ್, ಆರ್.ಶಂಕರ್ಗೆ ಸಚಿವ ಸ್ಥಾನ ನೀಡುವುದು ಬಾಕಿ ಇದ್ದು ಈಗ ಮುನಿರತ್ನಗೂ ಅವಕಾಶ ಕೊಡಬೇಕಿದೆ. ಹೆಚ್.ವಿಶ್ವನಾಥ್ ಕೂಡ ಪಟ್ಟು ಹಿಡಿದು ಕುಳಿತಿದ್ದಾರೆ. ಇದರ ನಡುವೆ ಉಮೇಶ್ ಕತ್ತಿಗೂ ಅವಕಾಶ ನೀಡಬೇಕಿದೆ. ಸಿ.ಪಿ ಯೋಗೇಶ್ವರ್, ತಿಪ್ಪಾರೆಡ್ಡಿ ಕೂಡ ನಿರೀಕ್ಷೆಯಲ್ಲಿದ್ದಾರೆ. ಇದರ ಜೊತೆ ರಾಜೂಗೌಡ, ಶಂಕರ್ ಪಟೀಲ್ ಮುನೇನಕೊಪ್ಪ, ಪೂರ್ಣಿಮಾ, ರೇಣುಕಾಚಾರ್ಯ, ಮುರುಗೇಶ್ ನಿರಾಣಿ ಪದೇ ಪದೇ ಸಿಎಂ ಮನೆಗೆ ಭೇಟಿ ನೀಡುತ್ತಿದ್ದಾರೆ.
ಸಂಪುಟ ವಿಸ್ತರಣೆ ವಿಳಂಬವಾದಷ್ಟು ಸಮಸ್ಯೆ ಹೆಚ್ಚಾಗಲಿದೆ ಎನ್ನುವ ಕಾರಣಕ್ಕೆ ಆದಷ್ಟು ಬೇಗ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಬೇಕು ಎಂದು ಸಿಎಂ ನಿರ್ಧರಿಸಿದ್ದಾರೆ. ಕೆಲವರನ್ನು ಸಂಪುಟದಿಂದ ಕೈಬಿಟ್ಟು ಹೊಸಬರಿಗೆ ಮತ್ತು ಸರ್ಕಾರ ರಚನೆಗೆ ಕಾರಣರಾದವರಿಬ್ಬರಿಗೂ ಅವಕಾಶ ನೀಡಬೇಕು ಎನ್ನುವ ನಿರ್ಧಾರ ಮಾಡಿ ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದಾರೆ. ಭೇಟಿಗೆ ಹೈಕಮಾಂಡ್ ಅನುಮತಿ ಸಿಗುತ್ತಿದ್ದಂತೆ ದೆಹಲಿ ವಿಮಾನ ಏರಲಿದ್ದಾರೆ.
ಒಂದು ವೇಳೆ ಹೈಕಮಾಂಡ್ ನಾಯಕರು ಅನುಮತಿ ನೀಡಲು ಮತ್ತಷ್ಟು ವಿಳಂಬ ಮಾಡಿದಲ್ಲಿ, ಉಪ ಚುನಾವಣಾ ಗೆಲುವಿನ ಸಂತೋಷ ಹಂಚಿಕೊಳ್ಳುವ ಹಾಗೂ ಬಿಹಾರ ಚುನಾವಣೆ ಮತ್ತು ಇತರ ರಾಜ್ಯಗಳ ಚಲನ ಚುನಾವಣೆ ಗೆಲುವಿಗೆ ಶುಭ ಕೋರುವ ನೆಪದಲ್ಲಿ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಿಎಂ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.