ಬೆಂಗಳೂರು: ದೂರದೃಷ್ಟಿಯುಳ್ಳ ಕೃಷಿಗೆ ಹೆಚ್ಚು ಒತ್ತು ನೀಡಿರುವ ಹಾಗೂ ರೈತರ ಆರ್ಥಿಕತೆ ಬಲಪಡಿಸಲು ವಿಶೇಷ ಗಮನ ಕೊಟ್ಟು ಬಜೆಟ್ ಮಂಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರಪೀಡಿತ ಭಾಗದಲ್ಲಿ ಕೃಷಿಯನ್ನು ಉತ್ತೇಜಿಸಲು ಭೂ ಮತ್ತು ಜಲ ಸಂರಕ್ಷಣೆಗೆ ಒತ್ತು ನೀಡಿದ್ದು, ಮೊದಲ ಬಾರಿಗೆ ಏತ ನೀರಾವರಿಗೆ ಐದು ಸಾವಿರ ಕೋಟಿ ಮೀಸಲಿರಿಸಲಾಗಿದೆ ಎಂದರು.
ಮಳೆಯಾಧಾರಿತ ಕೃಷಿಗೆ ಯೋಜನೆ ಹಾಗೂ ಆಡಳಿತ ಸುಧಾರಣೆಗೆ ಹಲವಾರು ಯೋಜನೆ ರೂಪಿಸಲಾಗಿದೆ. ಸುವರ್ಣಸೌಧಕ್ಕೆ ಕೆಲ ಇಲಾಖೆ ಸ್ಥಳಾಂತರಕ್ಕೆ ಒತ್ತು ನೀಡಿ, ಕೆಲ ಇಲಾಖೆ ಸ್ಥಳಾಂತರ ಮಾಡಲಾಗುತ್ತದೆ ಎಂದರು. ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಿದ್ದು, ₹500 ಕೋಟಿ ಮೀಸಲಿರಿಸಲಾಗಿದೆ. ಮಹದಾಯಿ ಗೆಜೆಟ್ ನೋಟಿಫಿಕೇಷನ್ ಆಗಿದ್ದು, ಆದಷ್ಟು ಬೇಗ ಪರಿಸರ ಇಲಾಖೆ ಅನುಮತಿ ಪಡೆಯಲಾಗುವುದು. ಹಾಗಾಗಿ ಯೋಜನೆ ಆರಂಭಕ್ಕೆ ₹500 ಕೋಟಿ ಮೀಸಲಿರಿಸಲಾಗಿದೆ. ಎತ್ತಿನಹೊಳೆಗೆ ₹1500 ಕೋಟಿ ಮೀಸಲಿರಿಸಲಾಗಿದೆ ಎಂದರು.
ವಿತ್ತೀಯ ಕೊರತೆ ಶೇ. 3ರೊಳಗಿದೆ ಎನ್ನುವುದು ಸಮಾಧಾನ ತಂದಿದೆ. ರಾಜ್ಯದ ಸಂಪನ್ಮೂಲ ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಆದರೆ ಪಿಂಚಣಿ ಸೇರಿ ಇತ್ಯಾದಿ 12 ಸಾವಿರ ಕೋಟಿ ಹೆಚ್ಚಾಗಿದೆ ಎಂದರು. ಸಾಲಮನ್ನಾಕ್ಕೆ ಹಣ ಹೊಂದಿಸಿ ಕೊಡಲಾಗುತ್ತಿದ್ದು, ನೆರೆ ಹಾವಳಿಗೆ ಹೆಚ್ಚಿನ ಹಣಕಾಸು ನೆರವು ನೀಡಿದ್ದೇವೆ. ಎರಡನೇ ಕಂತು ನೀಡಲು ಆರಂಭಿಸಿದ್ದು, ತೋಟಗಾರಿಕೆ, ಕೃಷಿ ಪದ್ಧತಿಗೆ ಒತ್ತು ನೀಡಿ, ಕೃಷಿಗೆ ಬರುವವರಿಗೆ ಹತ್ತು ಸಾವಿರ ಸಹಾಯಧನ ನೀಡಲಾಗುತ್ತದೆ ಎಂದರು.
ಸಾಲಮನ್ನಾ ಇತ್ಯಾದಿ ಹೊರೆಯಾಗಿದೆ. ಜೊತೆಗೆ ಕೇಂದ್ರದ ಅನುದಾನ ಕಡಿಮೆಯಾಗಿದೆ. ಹಾಗಾಗಿ ಇದನ್ನೆಲ್ಲಾ ಸರಿದೂಗಿಸಲು ಸ್ವಲ್ಪ ತೆರಿಗೆ ಹೆಚ್ಚು ಮಾಡಲಾಗಿದೆ. ಇದರಿಂದ ₹1500 ಕೋಟಿ ಹೆಚ್ಚುವರಿ ಆದಾಯ ಬರಬಹುದು. ಅಬಕಾರಿಯಿಂದ ₹ 1200 ಕೋಟಿ ಹೆಚ್ಚುವರಿ ಬರಲಿದೆ ಎಂದರು.
ನೀರಾವರಿಗೆ ಹಿಂದೆಂದಿಗಿಂತ ಹೆಚ್ಚು ಹಣ ಕೊಡಲಾಗಿದ್ದು, ₹ 21,308 ಕೋಟಿ ಕೊಡಲಾಗಿದೆ. ಇನ್ನೂ ಹೆಚ್ಚು ಮಾಡಲು ಪ್ರಯತ್ನ ನಡೆಸಲಾಗಿದೆ ಎಂದರು. ಇಡೀ ದೇಶದಲ್ಲಿ ಆರ್ಥಿಕ ಕುಸಿತವಾಗಿದ್ದು, ರಾಜ್ಯದಲ್ಲಿ ಕೂಡ ಕುಸಿತವಾಗಿದೆ. ಆದರೂ ಇತಿಮಿತಿಯಲ್ಲಿ ಸಂಪನ್ಮೂಲಗಳ ಕ್ರೂಢೀಕರಿಸಿ ಉತ್ತಮ ಬಜೆಟ್ ನೀಡಿದ್ದೇವೆ ಎಂದರು. ಇದೇ 13ರಂದು 15ನೇ ಹಣಕಾಸು ಆಯೋಗದ ಸಭೆ ಇದೆ. ಆ ಸಭೆಯಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಭಾಗವಹಿಸುತ್ತಾರೆ. ಅಲ್ಲಿ ರಾಜ್ಯಕ್ಕೆ ಬರಬೇಕಾದ ಹಣದ ಬಗ್ಗೆ ಮನವಿ ಸಲ್ಲಿಸಲಾಗುತ್ತದೆ ಎಂದರು.