ಬೆಂಗಳೂರು: ಅನಾಮಧೇಯ ಪತ್ರ, ಅತೃಪ್ತರ ಸಭೆ ಇತ್ಯಾದಿ ಚಟುವಟಿಕೆಯಿಂದ ಎಚ್ಚೆತ್ತುಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಡೆಗೂ ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತಗೆದುಕೊಳ್ಳಲು ಮುಂದಾಗಿದ್ದಾರೆ. ಜಿಲ್ಲಾವಾರು ಬಿಜೆಪಿ ಶಾಸಕರನ್ನು ಕರೆದು ಒನ್ ಟು ಒನ್ ಮಾತುಕತೆ ನಡೆಸುವ ಕೆಲಸ ಆರಂಭಿಸಿದ್ದಾರೆ.
ಶಾಸಕರ ಸಹಿ ಸಂಗ್ರಹ ಅಭಿಯಾನ, ದೆಹಲಿಗೆ ನಿಯೋಗದೊಂದಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭೇಟಿಗೆ ಕೆಲ ಶಾಸಕರು ಮುಂದಾಗಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಅತೃಪ್ತರ ಅಹವಾಲು ಆಲಿಸುವ ಕಾರ್ಯಕ್ಕೆ ಸಿಎಂ ಮುಂದಾಗಿದ್ದಾರೆ. ನಿನ್ನೆ ನಾಲ್ಕು ಜಿಲ್ಲೆಗಳ ಬಿಜೆಪಿ ಶಾಸಕರನ್ನು ಡಾಲರ್ಸ್ ಕಾಲೋನಿ ನಿವಾಸ ಧವಳಗಿರಿಗೆ ಕರೆದು ಮಾತುಕತೆ ನಡೆಸಿದ್ದಾರೆ.
ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಜಿಲ್ಲೆಯ ಬಿಜೆಪಿ ಶಾಸಕರನ್ನು ಕರೆದು ಒನ್ ಟು ಒನ್ ಮಾತುಕತೆ ನಡೆಸಿದ್ದಾರೆ. ಒನ್ ಟು ಒನ್ ಮಾತುಕತೆ ವೇಳೆ ಸರ್ಕಾರದ ಕಾರ್ಯವೈಖರಿ ಶಾಸಕರಿಗೆ ಇಷ್ಟವಿದೆಯೋ ಅಥವಾ ಏನಾದರೂ ಅಸಮಾಧಾನವಿದೆಯೋ ಎಂಬುದರ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಶಾಸಕರ ಕ್ಷೇತ್ರದ ಏನೇ ಅಭಿವೃದ್ಧಿ ಕಾರ್ಯಗಳು ಇದ್ದರೆ ನೇರವಾಗಿ ಬಂದು ತಮ್ಮನ್ನು ಭೇಟಿಯಾಗಲು ಶಾಸಕರಿಗೆ ಸಿಎಂ ಸೂಚನೆ ನೀಡಿದ್ದು, ಅಸಮಾಧಾನ, ಭಿನ್ನಾಭಿಪ್ರಾಯ ಯಾವುದೂ ಇರಕೂಡದು ಅಂತಾ ಹೇಳಿ ಕಳುಹಿಸುತ್ತಿದ್ದಾರೆ.
ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಪುತ್ರನ ಕಾರ್ಯವೈಖರಿ ಬಗ್ಗೆ ಹಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಹೀಗಾಗಿ ನೇರವಾಗಿ ಶಾಸಕರ ಜೊತೆ ಸಮಾಲೋಚನೆ ನಡೆಸುವ ಮೂಲಕ ಪಕ್ಷದ ಶಾಸಕರ ವಿಶ್ವಾಸಗಳಿಸಲು ಮುಂದಾಗಿರುವ ಸಿಎಂ ಇಂದೂ ಕೂಡಾ ನಾಲ್ಕು ಜಿಲ್ಲೆಗಳ ಪಕ್ಷದ ಶಾಸಕರ ಜೊತೆ ಚರ್ಚೆ ನಡೆಸಿದ್ದಾರೆ.
ಬಾಗಲಕೋಟೆ, ವಿಜಯಪುರ, ಗದಗ, ಬಳ್ಳಾರಿ ಜಿಲ್ಲೆಗಳ ಬಿಜೆಪಿ ಶಾಸಕರ ಜೊತೆ ಕೂಡಾ ಸಿಎಂ ಮಾತುಕತೆ ನಡೆಸಲಿದ್ದಾರೆ. ಕಲಾಪ ಮುಕ್ತಾಯದ ಬಳಿಕ ತಮ್ಮ ನಿವಾಸಕ್ಕೆ ಕರೆಸಿಕೊಂಡು ಶಾಸಕರ ಜೊತೆ ಸಮಾಲೋಚನೆ ನಡೆಸಲಿದ್ದಾರೆ.