ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಬೆಂಗಳೂರಿನಲ್ಲಿರುವ ವಿವಿಧ ದೇಶಗಳ ರಾಯಭಾರಿಗಳೊಂದಿಗೆ ಸಭೆ ನಡೆಸಿ, ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಆಹ್ವಾನಿಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ರಾಜ್ಯದಲ್ಲಿ ಹೂಡಿಕೆ ಮಾಡುವ ಅನುಕೂಲತೆಗಳ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಬಂಡವಾಳ ಹೂಡಲು ಮುಂದಾಗುವ ಹೂಡಿಕೆದಾರರಿಗೆ ಸರ್ಕಾರವು ಎಲ್ಲ ರೀತಿಯ ನೆರವು ಒದಗಿಸುವುದಾಗಿ ತಿಳಿಸಿದರು.
ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ನಿರ್ಮಿಸಲು ಸರ್ಕಾರವು ಹೊಸ ಕೈಗಾರಿಕಾ ನೀತಿ ಜಾರಿ, ಭೂಮಿ ಖರೀದಿ ಪ್ರಕ್ರಿಯೆ ಸರಳಗೊಳಿಸಲು, ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ ಸೇರಿದಂತೆ ಹಲವಾರು ಕ್ರಮಗಳನ್ನು ಕೈಗೊಂಡಿದೆ ಎಂದು ವಿವರಿಸಿದರು.
ಪೆರು ರಾಯಭಾರಿ ವಿಕ್ರಮ್ ವಿಶ್ವನಾಥ್ ಅವರು ನಿಯೋಗದ ನೇತೃತ್ವ ವಹಿಸಿದ್ದರು. ದೆಹಲಿಯಲ್ಲಿ ರಾಜ್ಯ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ್ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.