ಬೆಂಗಳೂರು: ನಗರದ ಶೇಷಾದ್ರಿ ರಸ್ತೆಯಲ್ಲಿರುವ ಶಿಕ್ಷಣ ಇಲಾಖೆಯ ನೂತನ ಕಟ್ಟಡವನ್ನ ಸಿಎಂ ಯಡಿಯೂರಪ್ಪ ಅವರು ಉದ್ಘಾಟನೆ ಮಾಡಿದರು. ಸಿಎಂಗೆ ಡಿಸಿಎಂ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಯಣ ಸಾಥ್ ನೀಡಿದರು.
ಕಟ್ಟಡ ಉದ್ಘಾಟನೆ ಜೊತೆಗೆ ಮೈತ್ರಿ ಸಹಾಯವಾಣಿ, ವಿಜಯಿಭವ ಯೂಟ್ಯೂಬ್ ಚಾನಲ್ ಹಾಗೂ ಖಾಸಗಿ ಅನುದಾನಿತ ಕಾಲೇಜುಗಳ ಪೋರ್ಟಲ್ ಕೂಡ ಉದ್ಘಾಟನೆ ಮಾಡಲಾಯಿತು. ಸಿಎಂ ಯಡಿಯೂರಪ್ಪ ಮಾತನಾಡಿ, 'ಶಿಕ್ಷಣ' ಜಗತ್ತನ್ನು ಬದಲಾಯಿಸಬಲ್ಲ ಪ್ರಬಲ ಅಸ್ತ್ರ ಎಂದು ನೆಲ್ಸನ್ ಮಂಡೇಲಾ ಹೇಳಿದ್ದಾರೆ. ಸುಶಿಕ್ಷಣ ನೀಡುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ. ಶಿಕ್ಷಣ ಹಾಗೂ ಆರೋಗ್ಯಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡಿದೆ. ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ 29 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಿದ್ದೇವೆ ಎಂದರು.
ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇವೆ. ಬೋಧಕರ ಹುದ್ದೆ ಆನ್ ಲೈನ್ ಮೂಲಕ ನೇಮಕ ಮಾಡಲಾಗುವುದು. ಉನ್ನತ ಶಿಕ್ಷಣಕ್ಕೆ ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ಜಾರಿಗೆ ತರುತ್ತೇವೆ ಎಂದು ಸಿಎಂ ತಿಳಿಸಿದರು.