ಮಹದೇವಪುರ(ಬೆಂಗಳೂರು): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಮಹದೇವಪುರ ಕ್ಷೇತ್ರ ವ್ಯಾಪ್ತಿಯ ಕಾಡುಗೋಡಿಯ ಟ್ರೀ ಪಾರ್ಕ್, ಕನ್ನಮಂಗಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಸ್ಯ ಶಾಸ್ತ್ರ ಪಾರ್ಕ್, ಕನ್ನಮಂಗಲದ ಮುಳ್ಳಿನಗೆರೆ ಕೆರೆ ಮತ್ತು ಜನಪದರು ಸಭಾಂಗಣ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು.
ಬೆಂಗಳೂರು ಮಿಷನ್-2022ರ ಬೆಂಗಳೂರಿಗೆ ನವ ಚೈತನ್ಯ ಕಾರ್ಯಕ್ರಮದಡಿ ಅರಣ್ಯ ಇಲಾಖೆಯ ವತಿಯಿಂದ ಸುಮಾರು 22 ಎಕರೆ ವಿಸ್ತೀರ್ಣದಲ್ಲಿ ಈ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಪಾರ್ಕ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ, ತೋಟಗಾರಿಕೆ ಸಚಿವ ಆರ್.ಶಂಕರ್ ಭಾಗವಹಿಸಿದ್ದರು.
ಇನ್ನು ಕನ್ನಮಂಗಲದಲ್ಲಿ ಅಟಲ್ ಬಿಹಾರಿ ಸಸ್ಯ ಶಾಸ್ತ್ರೀಯ ತೋಟವನ್ನು ರುದ್ರಾಕ್ಷಿ ಸಸಿ ನೆಡುವ ಮೂಲಕ ಉದ್ಘಾಟಿಸಲಾಯಿತು. ತೋಟಗಾರಿಕೆ ಇಲಾಖೆಯಿಂದ ನಿರ್ಮಿಸಲಾದ ಈ ಸಸ್ಯ ತೋಟ ಸುಮಾರು 70 ಎಕರೆ ವಿಸ್ತೀರ್ಣದಲ್ಲಿದೆ. 5.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದೆ.
ಸಸ್ಯ ತೋಟದಲ್ಲಿ 3905 ವಿವಿಧ ಜಾತಿಯ ಮರಗಳಿವೆ. ಹಾಗೂ 2,800 ಮೀಟರ್ನಷ್ಟು ವಾಯುವಿಹಾರದ ಪಥ ನಿರ್ಮಾಣ ಮಾಡಲಾಗಿದೆ. ಜೊತೆಗೆ ಕನ್ನಮಂಗಲ ಬಳಿಕ ಬಿದರಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಇರುವ ಸುಮಾರು 17 ಎಕರೆ ವ್ಯಾಪ್ತಿಯಲ್ಲಿರುವ ಮುಳ್ಳು ಕೆರೆಯನ್ನೂ ಕೂಡ ಉದ್ಘಾಟನೆ ಮಾಡಲಾಗಿದೆ.
ನಂತರ ಮಾತನಾಡಿದ ಸಿಎಂ ಯಡಿಯೂರಪ್ಪ, ಸುಮಾರು 22 ಎಕರೆ ವಿಸ್ತೀರ್ಣದಲ್ಲಿ ಟ್ರೀ ಪಾರ್ಕ್ ನಿರ್ಮಿಸಲಾಗಿದೆ. ಪಾರ್ಕ್ ಉದ್ಘಾಟನೆ ಮತ್ತು ಅಟಲ್ ಬಿಹಾರಿ ವಾಜಪೇಯಿ ಕರ್ನಾಟಕದ ಮೊದಲ ಬೊಟಾನಿಕಲ್ ಗಾರ್ಡನ್ ನಿರ್ಮಾಣ ಮಾಡಲಾಗಿದೆ. ಇದನ್ನು ಈ ಭಾಗದ ಜನ ಉಪಯೋಗಿಸಿಕೊಳ್ಳಬೇಕು ಎಂದರು.
ಮಹದೇವಪುರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ಮೇಲೆ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿದೆ. ಇಲ್ಲಿನ ಶಾಸಕರು ಮತ್ತು ಮುಖಂಡರ ಶ್ರಮದಿಂದ ತುಂಬಾ ಅಭಿವೃದ್ದಿ ಕೆಲಸಗಳಾಗಿದೆ ಎಂದರು. ನಂತರ ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಪರೀವಿಕ್ಷಣೆ ಮಾಡಿ ಕೆರೆ ಅಭಿವೃದ್ಧಿ ಮಾಡಲು ಒಂದು ಸಭೆ ಕರೆದು ಚರ್ಚಿಸುವುದಾಗಿ ತಿಳಿಸಿದರು.
ಇನ್ನು ಇದೇ ವೇಳೆ ಸಚಿವ ಅರವಿಂದ ಲಿಂಬಾವಳಿ ಮಾತನಾಡಿ, ಟ್ರೀ ಪಾರ್ಕ್ ಮತ್ತು ಬೊಟಾನಿಕಲ್ ಗಾರ್ಡನ್ನಲ್ಲಿ ಸಾರ್ವಜನಿಕರು ನಾಳೆಯಿಂದ ವಾಕಿಂಗ್ ಮಾಡಬಹುದು. ಬೆಂಗಳೂರು ಮಿಷನ್-2022 ಅಡಿಯಲ್ಲಿ ಈ ಪಾರ್ಕ್ ಅನ್ನು ನಿರ್ಮಿಸಲಾಗಿದೆ. ಬೆಂಗಳೂರನ್ನು ಗ್ರೀನ್ ಸಿಟಿ ಮಾಡಲು ಎಲ್ಲರೂ ಪರಿಸರವನ್ನು ಬೆಳೆಸಬೇಕು ಎಂದರು.
ಈ ಕಾರ್ಯ ಕ್ರಮವನ್ನು ಕೋವಿಡ್ ನಿಯಮಗಳನ್ನು ಪಾಲಿಸಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ಅನೇಕರಿಗೆ ಅವಕಾಶ ನೀಡಿಲ್ಲ. ಮಹದೇವಪುರದ ಟ್ರೀ ಪಾರ್ಕ್ ಉದ್ಘಾಟನೆ ಮಾಡಿದ್ದಾರೆ. ಚಿಕ್ಕ ಲಾಲ್ಬಾಗ್ ಅಂತ ಹೆಸರಿರುವ ಇಲ್ಲಿನ ಪಾರ್ಕಿಗೆ ಸಿಎಂ ಹೊಸ ನಾಮಕರಣ ಮಾಡಲಿದ್ದಾರೆ.
ಈ ಭಾಗದಲ್ಲಿರುವ ಜನರು ನಾಳೆಯಿಂದ ವಾಕಿಂಗ್ ಹೋಗಬಹುದು. ಕನ್ನಮಂಗಲ ಕೆರೆಯ ಉದ್ಘಾಟನೆ ಮಾಡಲಾಗಿದೆ. ಈ ಭಾಗದಲ್ಲಿರುವ ಹಾಗೂ ಎಲ್ಲಾ ಕಲಾವಿದರು ನಾಟಕ ಪ್ರದರ್ಶನ ಮಾಡಬಹುದು. ಇಲ್ಲಿ ರೊಟೇಶನ್ ಸ್ಟೇಜ್ ಇದೆ. ಇದು ಭಾರತದಲ್ಲೆ ಪ್ರಥಮ ಬಾರಿಗೆ ನಿರ್ಮಿಸಲಾಗಿದೆ. ಈ ಭಾಗದ ಜನರ ಪರವಾಗಿ ವಿಶೇಷವಾಗಿ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.