ಬೆಂಗಳೂರು: ನಮ್ಮದು ರೈತ ಪರ ಸರ್ಕಾರ ಅನ್ನೋದು ತಮ್ಮೆಲ್ಲರಿಗೂ ಗೊತ್ತಿದೆ. ರೈತರು, ಆರೋಗ್ಯ, ಶಿಕ್ಷಣ ನಮ್ಮ ಸರ್ಕಾರದ ಆದ್ಯತೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು.
ಸಹಕಾರ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಹಮ್ಮಿಕೊಂಡಿದ್ದ ' ರೈತ ಸ್ಪಂದನ ' ಹೆಸರಿನಲ್ಲಿ 2021-22ನೇ ಸಾಲಿಗೆ ವಿವಿಧ ಕೃಷಿ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಲ ವಿತರಣೆ ಮಾಡಿ ಅವರು ಮಾತನಾಡಿದರು.
ರೈತರಿಗೆ, ಸ್ತ್ರೀ ಶಕ್ತಿ ಗುಂಪುಗಳಿಗೆ ಸಾಲ ನೀಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯ ನೀಡುವ ಉದ್ದೇಶ ಹೊಂದಿದ್ದೇವೆ. 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 19,370 ಕೋಟಿ ರೂ. ಅಲ್ಪಾವಧಿ ಬೆಳೆ ಸಾಲ ಮತ್ತು 0.60 ಲಕ್ಷ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 1,440 ಕೋಟಿ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ವಿತರಣೆ ಗುರಿ ಹೊಂದಲಾಗಿದೆ.
ಕಳೆದ ವರ್ಷದಲ್ಲಿ ಸಹಕಾರ ಸಂಘಗಳು ಕೃಷಿ ಕ್ಷೇತ್ರದಲ್ಲಿ 25.67 ಲಕ್ಷ ರೈತರಿಗೆ 16,641.00 ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ, 0.52 ಲಕ್ಷ ರೈತರಿಗೆ 1260.21 ಕೋಟಿ ರೂ.ಗಳ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಣೆ ಮಾಡಿದ್ದು, ಗುರಿಗೆ ಎದುರಾಗಿ ಶೇ.114ರಷ್ಟು ಸಾಧನೆ ಮಾಡಿರುತ್ತೇವೆ.
ಇದರಲ್ಲಿ 0.57 ಲಕ್ಷ ರೈತರಿಗೆ ರೂ.105.64 ಕೋಟಿಗಳ ಸಾಲವನ್ನು ಹೈನುಗಾರಿಕೆ ಚಟುವಟಿಕೆಗೆ ನೀಡಲಾಗಿದೆ. ಅಭಿವೃದ್ಧಿ ಆಗುತ್ತಿಲ್ಲ ಏಕೆ ಎಂದು ಟೀಕೆ ಮಾಡುವವರಿಗೆ ಅಂಕಿ - ಅಂಶಗಳೇ ಉತ್ತರ ಕೊಡುತ್ತವೆ ಎಂದು ಪರೋಕ್ಷವಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರಿಗೆ ಸಿಎಂ ತಿರುಗೇಟು ನೀಡಿದರು.
ಇದೊಂದೇ ಇಲಾಖೆಯಲ್ಲ. ಎಲ್ಲ ಇಲಾಖೆಯಲ್ಲೂ ಉತ್ತಮ ಕೆಲಸ ಮಾಡಿದ್ದೇವೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ 4.61 ಕೋಟಿ ರೂ. ಮೊತ್ತದ ಆಹಾರ ಕಿಟ್, ವೈದ್ಯಕೀಯ ಪರಿಕರಗಳನ್ನು ಸಹಕಾರ ಸಂಘಗಳು ನೀಡಿವೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 58 ಕೋಟಿ ರೂ. ನೆರವು ನೀಡಿ ತಮ್ಮ ಸಾಮಾಜಿಕ ಜವಾಬ್ದಾರಿ ನಿರ್ವಹಣೆ ಮಾಡುತ್ತಿವೆ. ಈ ಸಂಘಗಳಿಗೆ ಆಭಾರಿಯಾಗಿದ್ದೇವೆ ಎಂದು ಹೇಳಿದರು.
32 ಲಕ್ಷ ಸದಸ್ಯರಿಗೆ ಅನುಕೂಲ
ಮೇ ಅಂತ್ಯಕ್ಕೆ 3.29 ಲಕ್ಷ ರೈತರಿಗೆ ರೂ.2550.72 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 0.05 ಲಕ್ಷ ರೈತರಿಗೆ ರೂ.121.16 ಕೋಟಿ ಮಧ್ಯಮಾವಧಿ ದೀರ್ಘಾವಧಿ ಸಾಲ ವಿತರಣೆ ಮಾಡಲಾಗಿದೆ. ರಾಜ್ಯದಲ್ಲಿ ಇಲ್ಲಿಯವರೆಗೆ ಸಹಕಾರ ಕ್ಷೇತ್ರದಲ್ಲಿ 2.5 ಲಕ್ಷ ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳನ್ನು ರಚನೆ ಮಾಡಲಾಗಿದ್ದು, ಸುಮಾರು 32 ಲಕ್ಷ ಸದಸ್ಯರಿರುತ್ತಾರೆ.
2020-21ನೇ ಸಾಲಿನಲ್ಲಿ 0.34 ಲಕ್ಷ ಗುಂಪುಗಳಿಗೆ ರೂ. 1201.08 ಕೋಟಿ ಸಾಲ ವಿತರಿಸಲಾಗಿದ್ದು, 0.77 ಲಕ್ಷ ಗುಂಪುಗಳಿಂದ ರೂ.1633.59 ಕೋಟಿ ಹೊರ ಬಾಕಿ ಹೊಂದಿದ್ದು, ಗುರಿಗೆ ಎದುರಾಗಿ ಶೇ.100.14ರಷ್ಟು ಪ್ರಗತಿ ಸಾಧಿಸಲಾಗಿದೆ. 2021-22ನೇ ಸಾಲಿನಲ್ಲಿ 0.40 ಲಕ್ಷ ಗುಂಪುಗಳಿಗೆ ರೂ.1,400.00 ಕೋಟಿ ರೂ.ಗಳ ಸಾಲ ವಿತರಿಸುವ ಗುರಿ ಹೊಂದಲಾಗಿದೆ. ಮೇ ಅಂತ್ಯಕ್ಕೆ 6700 ಗುಂಪುಗಳಿಗೆ 233.33 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ವಿವರಿಸಿದರು.
ಎಚ್ಚರ ವಹಿಸಿ : ಪ್ರಧಾನಿ ನರೇಂದ್ರ ಮೋದಿಯವರ ಆಶೀರ್ವಾದದಿಂದ ಹತ್ತು ಹಲವು ಅಭಿವೃದ್ಧಿ ಕೆಲಸ ಮಾಡುತ್ತಿದ್ದೇವೆ. ಇವತ್ತಿನಿಂದ ಲಾಕ್ಡೌನ್ ಸಡಿಲಿಕೆ ಮಾಡಿದ್ದೇವೆ. ಹಾಗಂತಾ ಕೋವಿಡ್ ಹೋಗಿದೆ ಎನ್ನುವುದು ಬೇಡ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಯ್ದುಕೊಂಡು ಕೋವಿಡ್ ನಿವಾರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಇಷ್ಟಪಟ್ಟು ರೈತ ಗೀತೆ ಹಾಡಿಸಿದ ಸಿಎಂ : ಭಾಷಣ ಮಾಡಲು ಬಂದ ಸಿಎಂ ಯಡಿಯೂರಪ್ಪ ಅವರು, ತಾವೇ ಇಷ್ಟಪಟ್ಡು ರೈತಗೀತೆ ಹಾಡಿಸಿದ ಪ್ರಸಂಗ ನಡೆಯಿತು. ಸಂಗೀತಗಾರರ ಕಡೆ ನೋಡಿ ಏನ್ರಪ್ಪ ರೈತ ಗೀತೆ ಹೇಳುತ್ತಿರಾ?, ಎಲ್ಲ ಎಂದರು. ಹೊರಗೆ ನಿಂತಿದ್ದ ಸಂಗೀತಗಾರರು ಓಡಿ ಬಂದು ಸಿಎಂ ಬೇಡಿಕೆಗೆ ರೈತಗೀತೆ ಹಾಡಿದರು. ಹಾಡು ಮುಗಿಯುವವರೆಗೂ ಭಾಷಣ ಮಾಡುವ ಜಾಗದಲ್ಲೇ ನಿಂತೇ ಇದ್ದರು.
ಇದಕ್ಕೂ ಮುನ್ನ ಸಹಕಾರ ಇಲಾಖೆ ಸಚಿವ ಎಸ್. ಟಿ. ಸೋಮಶೇಖರ್ ಮಾತನಾಡಿ, ಲಾಕ್ ಡೌನ್ ಸಂದರ್ಭದಲ್ಲೂ ಸಾಲ ಕೊಡುವುದಕ್ಕೆ ತೊಂದರೆ ಆಗಬಾರದು ಎಂದು ಸಿಎಂ ಆದೇಶ ನೀಡಿದ್ದರು. ಅದರಂತೆ ಕಳೆದ ಸಾಲಿನಲ್ಲಿ 24 ಲಕ್ಷ ರೈತರಿಗೆ 16,641 ಕೋಟಿ ರೂ. ಸಾಲ ನೀಡಿದ್ದೇವೆ ಎಂದರು.
ಡಿಸಿಸಿ ಬ್ಯಾಂಕ್‌ಗಳ ಮೂಲಕ ರೈತರಿಗೆ ಅನ್ಯಾಯ ಆಗಬಾರದು ಎಂದು ಸಿಎಂ ಆದೇಶ ನೀಡಿದ್ದರು. ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನಲ್ಲಿ ಸಮಸ್ಯೆ ಆಗಿತ್ತು, ಅಧ್ಯಕ್ಷರನ್ನು ಬದಲಾಯಿಸಿದ್ದೇವೆ. ಇವತ್ತು ಎಲ್ಲ 21 ಡಿಸಿಸಿ ಬ್ಯಾಂಕ್‌ಗಳು ಲಾಭದಲ್ಲಿವೆ ಎಂದರು. ಪ್ರಸಕ್ತ ವರ್ಷ 30.26 ಲಕ್ಷ ರೈತರಿಗೆ ಸಾಲ ಕೊಡುವ ಗುರಿ ಇದೆ. ಇವತ್ತು ಸಿಎಂ ಯಡಿಯೂರಪ್ಪ ಪ್ರಾಯೋಗಿಕವಾಗಿ ಚಾಲನೆ ನೀಡುತ್ತಿದ್ದಾರೆ. ನಂತರ ಫಲಾನುಭವಿಗಳಿಗೆ ಸಾಲ ನೀಡಲಾಗುತ್ತದೆ ಎಂದು ಹೇಳಿದರು.
ಅವ್ಯವಹಾರಗಳದ ತನಿಖೆ : ಮಂಡ್ಯ ಮಿಲ್ಕ್ ಯೂನಿಯನ್ನಲ್ಲಿ ಸ್ವಲ್ಪ ಅವ್ಯವಹಾರ ಆಗಿದೆ. ಅದು ಗಮನಕ್ಕೆ ಬಂದ ತಕ್ಷಣ ಸಿಎಂ ಯಡಿಯೂರಪ್ಪ ಸಿಐಡಿ ತನಿಖೆಗೆ ಆದೇಶಿಸಿದ್ದಾರೆ ಎಂದರು. ಡಿಸಿಎಂ ಲಕ್ಷ್ಮಣ್ ಸವದಿ ಮಾತನಾಡಿ, ಈ ಹಿಂದೆ ಡಿಸಿಸಿ ಬ್ಯಾಂಕಿನಿಂದ ಸಾಲ ಕೊಟ್ಟರೆ ವಸೂಲಾತಿಗೆ ವಾಹನಗಳನ್ನು ನೀಡಬೇಕಾಗಿತ್ತು. ಆದರೆ, ಈಗ ಲಕ್ಷಾಂತರ ಜನರು ಸಾಲ ಪಡೆದಿದ್ದು, ಶೇ. 90 ಜನರು ಸಾಲ ವಾಪಸ್ ಮಾಡ್ತಿದ್ದಾರೆ. ಇದಕ್ಕೆ ಕಾರಣ ಅವಧಿ ಪೂರ್ವ ಸಾಲ ಮರುಪಾವತಿ ಮಾಡಿದರೆ ರಾಜ್ಯ ಸರ್ಕಾರ ಶೇ. 4, ಕೇಂದ್ರ ಸರ್ಕಾರದಿಂದ ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದರಿಂದ ಸಾಲ ಮರುಪಾವತಿ ಉತ್ತಮವಾಗಿ ಆಗುತ್ತಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಲಾಭದಾಯಕ ಯೋಜನೆಗಳಿಂದ ಜನರಿಗೆ ಅನುಕೂಲವಾಗುತ್ತಿದೆ. ಹೆಚ್ಚು ಎಥೆನಾಲ್ ಘಟಕಗಳ ಸ್ಥಾಪನೆಯಿಂದ ರೈತರಿಗೆ ಅನುಕೂಲ ಹಾಗೂ ಹೆಚ್ಚು ಲಾಭ ಆಗುತ್ತಿದೆ ಎಂದರು.