ಬೆಂಗಳೂರು: ಮಹದಾಯಿ ಜಲವಿವಾದ ಸಂಬಂಧ ಮಾತುಕತೆ ನಡೆಸಲು ಮುಹೂರ್ತ ನಿಗದಿಯಾಗಿದ್ದು, ಸೆಪ್ಟಂಬರ್ 14ರಂದು ಗೋವಾ ಸಿಎಂ ಜೊತೆ ಮುಖ್ಯಮಂತ್ರಿ ಯಡಿಯೂರಪ್ಪ ಮಾತುಕತೆ ನಡೆಸಲಿದ್ದಾರೆ ಎನ್ನಲಾಗ್ತಿದೆ.
ಪಣಜಿಯಲ್ಲಿ ನಡೆಯಲಿರುವ ಮಹತ್ವದ ಮಾತುಕತೆಯಲ್ಲಿ, ಗೋವಾ ಸಿಎಂ ಪ್ರಮೋದ್ ಸಾವಂತ್ ಜೊತೆ ಸಿಎಂ ಬಿಎಸ್ವೈ ಚರ್ಚೆ ನಡೆಸಲಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಜೊತೆ ಒಂದು ಹಂತದ ಮಾತುಕತೆ ನಡೆಸಿರುವ ಸಿಎಂ, ನಂತರ ಮತ್ತೊಮ್ಮೆ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗೋವಾ, ಮಹಾರಾಷ್ಟ್ರ ಸಿಎಂಗಳ ಜೊತೆ ಮಾತುಕತೆ ನಡೆಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉಭಯ ರಾಜ್ಯಗಳ ಅಧಿಕಾರಿಗಳನ್ನು ಸಂಪರ್ಕಿಸಿ ಸಮಯ ನಿಗದಿಪಡಿಸುವಲ್ಲಿ ಸಫಲರಾಗಿದ್ದಾರೆ ಎಂದು ತಿಳಿದುಬಂದಿದೆ.