ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿನ್ನೆ ವಿಧಾನಸೌಧ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಿಎಂ ದೇವರಾಜ ಅರಸು ಪುಣ್ಯತಿಥಿ ಸಮಾರಂಭದಲ್ಲಿ ಒಂದು ವಿಶಿಷ್ಟ ಗಿಡವನ್ನು ನೆಟ್ಟಿದ್ದಾರೆ. ವಿದೇಶಿ ಮೂಲದ ಈ ಗಿಡ ಹಲವು ಮಹತ್ವಗಳನ್ನು ಒಳಗೊಂಡಿದೆ.
ಗಿಡ ನೆಟ್ಟ ನಂತರ ಸಿಎಂ ಈ ಗಿಡದ ಮಹತ್ವವನ್ನು ವಿವರಿಸಿದರು. ತೋಟಗಾರಿಕೆ ಇಲಾಖೆ ಹಿರಿಯ ಅಧಿಕಾರಿ ಕಾಂತರಾಜು ಪ್ರಕಾರ, ತುಬೂಬಿಯಾ ಅರ್ಜಿನೇಷಿಯಾ ಹೆಸರಿನ ಈ ಗಿಡ ಇಂಡೋನೇಷ್ಯಾ ಹಾಗೂ ದಕ್ಷಿಣ ಅಮೆರಿಕ ಭಾಗದಲ್ಲಿ ಹೆಚ್ಚಾಗಿ ಕಂಡು ಬರುತ್ತದೆ. ಈ ಗಿಡ ಕೇವಲ ಐದು ವರ್ಷದಲ್ಲಿ 10 ಅಡಿ ಬೆಳೆದು ಹಳದಿ ಬಣ್ಣದ ಹೂವನ್ನು ಬಿಡುತ್ತದೆ. ಉದ್ಯಾನದ ಅಂದ ಹೆಚ್ಚಿಸಲು ಇವುಗಳನ್ನು ಬೆಳೆಸಲಾಗುತ್ತದೆ. ಚಿಟ್ಟೆಗಳನ್ನು ಆಕರ್ಷಿಸುವ ಈ ಗಿಡ, ಪರಿಸರ ಸ್ನೇಹಿ ಕೂಡ ಆಗಿದೆ. ಜೈವಿಕವಾಗಿ ಪ್ರಕೃತಿ ಸಮತೋಲನ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಇದರ ಆಯಸ್ಸು 25 ರಿಂದ 30 ವರ್ಷ ಎಂದರು.
ಪರಿಸರ ಪ್ರೇಮಿ ಪ್ರಸನ್ನ ಮಾತನಾಡಿ, ಕಾವೇರಿಯಲ್ಲಿ ಕೂಡ ಇಂದು ಒಂದು ಗಿಡವನ್ನು ನೆಡಲಾಗಿದೆ. ಇದು ಕೂಡ ಅತ್ಯಂತ ಸುಂದರವಾಗಿ ಬೆಳೆದು ನಿಲ್ಲಲಿದೆ ಎಂದರು. ಇನ್ನು ಶಾರದಾ ಸೇವಾಶ್ರಮದ ಮುಖ್ಯಸ್ಥರಾದ ಡಾ. ಮಮತಾ ಮಾತನಾಡಿ, ಇಂದು ಸಿಎಂ ನಿವಾಸ ಕಾವೇರಿಯಲ್ಲಿ ಒಂದು ಗಂಧದ ಗಿಡ ಕೂಡ ನೆಡಲಾಗಿದೆ. ವರ್ಷದಲ್ಲಿ ಒಂದು ದಿನ ಮಾತ್ರವಲ್ಲ ಪ್ರತಿದಿನ ಪರಿಸರ ದಿನ ಆಚರಿಸಬೇಕು ಎಂಬ ಆಶಯ ವ್ಯಕ್ತಪಡಿಸಿದರು.