ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ ವಿಶೇಷ ವಿಮಾನದ ಮೂಲಕ ಅವರು ಪ್ರಯಾಣ ಕೈಗೊಳ್ಳಲಿದ್ದು, ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತಾ ಶಾ ಸೇರಿ ಅನೇಕ ಪ್ರಮುಖ ಸಚಿವರನ್ನ ಭೇಟಿ ಮಾಡಲಿದ್ದಾರೆ.
ರಾಜ್ಯದ ನೀರಾವರಿ ಯೋಜನೆ, ಅಭಿವೃದ್ಧಿ ಕಾಮಗಾರಿ, ಜಿಎಸ್ಟಿ ವಿಷಯಗಳ ಕುರಿತು ವಿವಿಧ ಸಚಿವರ ಜೊತೆ ಚರ್ಚೆ ನಡೆಸಲಿದ್ದೇನೆ ಎಂದು ಮುಖ್ಯಮಂತ್ರಿ ಬಿಎಸ್ವೈ ಈಗಾಗಲೇ ಹೇಳಿದ್ದು, ಸಂಪುಟ ವಿಸ್ತರಣೆ ಹಾಗೂ ಪುನರ್ರಚನೆ ವಿಷಯ ನಮ್ಮ ಮುಂದಿಲ್ಲ ಎಂದಿದ್ದಾರೆ. ರಾಜ್ಯದ ಅಭಿವೃದ್ಧಿ ವಿಚಾರ ಮುಂದಿಟ್ಟುಕೊಂಡು ದೆಹಲಿಗೆ ತೆರಳುತ್ತಿರುವುದಾಗಿ ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ. ಪ್ರಧಾನಿಗಳ ಭೇಟಿಗೆ ಬಿಎಸ್ವೈಗೆ ಇನ್ನೂ ಸಮಯ ನೀಡಿಲ್ಲ, ಅವರು ನೀಡುವ ಸಮಯಕ್ಕೆ ಭೇಟಿಯಾಗಿ ಮಾತುಕತೆ ನಡೆಸಲಿದ್ದು ಶನಿವಾರ ವಾಪಸ್ ಮರಳುತ್ತೇನೆ ಎಂದು ಹೇಳಿದ್ದಾರೆ. ಆದರೆ ಕೆಲವೊಂದು ಮೂಲಗಳ ಪ್ರಕಾರ ಸಚಿವ ಸಂಪುಟ ಪುನರ್ ರಚನೆ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗುತ್ತಿದೆ.
ಮೋದಿ ಜೊತೆ ಕೋವಿಡ್ ಬಗ್ಗೆ ಸಿಎಂ ವಿಡಿಯೋ ಕಾನ್ಪರೆನ್ಸ್
ಕರ್ನಾಟಕದ ಮುಖ್ಯಮಂತ್ರಿ ಸೇರಿದಂತೆ ವಿವಿಧ ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ಮೋದಿ ಇಂದು ವಿಡಿಯೋ ಕಾನ್ಪರೆನ್ಸ್ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ವಿಡಿಯೋ ಸಂವಾದ ನಡೆಯಲಿದ್ದು, ಈ ವೇಳೆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿ ಹಾಗೂ ಲಸಿಕೆ ಹಂಚಿಕೆ ವಿಚಾರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ಚರ್ಚೆ ಮುಕ್ತಾಯದ ಬಳಿಕ ಬಿಎಸ್ವೈ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ.
ಕೇಂದ್ರ ಸಚಿವ ಸಂಪುಟ ಪುನರ್ ರಚನೆಯಾಗಿರುವ ರೀತಿಯಲ್ಲೇ ರಾಜ್ಯದಲ್ಲೂ ಸಚಿವ ಸಂಪುಟ ವಿಸ್ತರಣೆ ಮಾಡಿ ಕೆಲವೊಂದು ಹೊಸ ಮುಖಗಳಿಗೆ ಅವಕಾಶ ನೀಡಬೇಕು ಎಂಬ ಮಾತು ಕೇಳಿ ಬರುತ್ತಿದ್ದು, ಈ ವಿಚಾರವಾಗಿ ಚರ್ಚೆ ನಡೆಯುವ ಸಾಧ್ಯತೆ ಇದೆ.