ಬೆಂಗಳೂರು: ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಸಿಕೆ ಒಂದೇ ರಾಮಬಾಣವಾಗಿದೆ. ಹೀಗಾಗಿ ಲಸಿಕಾಕರಣದತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಿತ್ತ ಹರಿಸಿದ್ದು, ಎರಡನೇ ಲಸಿಕೆ ನೀಡುವಿಕೆಯ ಪ್ರಗತಿ ಕುರಿತು ಮಂಗಳವಾರ ಜಿಲ್ಲಾಡಳಿತಗಳ ಜೊತೆ ವಿಡಿಯೋ ಸಂವಾದದ ಮೂಲಕ ಸಭೆ ನಡೆಸಲಿದ್ದಾರೆ.
ಮಂಗಳವಾರ ಸಂಜೆ 4 ಗಂಟೆಗೆ ಆರ್.ಟಿ ನಗರದ ಖಾಸಗಿ ನಿವಾಸದಿಂದಲೇ ವರ್ಚುವಲ್ ಮೂಲಕ ಆಯ್ದ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು, ಜಿಲ್ಲಾ ಶಸ್ತ್ರ ಚಿಕಿತ್ಸಕರ ಜೊತೆ ಸಭೆ ನಡೆಸಲಿದ್ದಾರೆ.
ಆಯಾ ಜಿಲ್ಲೆಗಳಲ್ಲಿ ಲಸಿಕೆ ಪಡೆಯಲು ಅರ್ಹರಾಗಿರುವ ಜನರ ಸಂಖ್ಯೆ, ಮೊದಲ ಡೋಸ್ ಲಸಿಕೆ ಪಡೆದವರ ಪ್ರಮಾಣ, ಎರಡನೇ ಡೋಸ್ ಲಸಿಕೆ ಪಡೆದವರ ಪ್ರಮಾಣದ ಕುರಿತು ಸಿಎಂ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ಡೋಸ್ ನೀಡಿಕೆ ತೃಪ್ತಿದಾಯಕವಾಗಿದ್ದು, ಕೆಲ ಜಿಲ್ಲೆಗಳಲ್ಲಿ ಎರಡನೆ ಲಸಿಕೆ ನೀಡಿಕೆಯಲ್ಲಿ ಸಾಕಷ್ಟು ಕೊರತೆ ಕಂಡುಬಂದಿದೆ. 60 ಲಕ್ಷ ಜನರಿಗೆ ಎರಡನೇ ಡೋಸ್ ಕೊಡಬೇಕಿದೆ. ಈ ಹಿನ್ನೆಲೆಯಲ್ಲಿ ಎರಡನೇ ಡೋಸ್ ಹಂಚಿಕೆಯ ಲಸಿಕಾಕರಣಕ್ಕೆ ವೇಗ ನೀಡುವ ಕುರಿತು ಸಭೆಯಲ್ಲಿ ಸಿಎಂ ಸೂಚನೆ ನೀಡಲಿದ್ದಾರೆ.
ಲಸಿಕೆ ಪಡೆದವರಿಗೆ ಕೋವಿಡ್ ಸೋಂಕು ಬಂದರೂ ಅಷ್ಟಾಗಿ ಸಮಸ್ಯೆ ಕಾಣಿಸಿಕೊಳ್ಳುತ್ತಿಲ್ಲ. ಅವರಿಗೆ ಆಸ್ಪತ್ರೆಗಳ ಅಗತ್ಯವೂ ಬೀಳುತ್ತಿಲ್ಲ. ಲಸಿಕೆ ಪಡೆಯದವರಲ್ಲೇ ಸೋಂಕು ಸಮಸ್ಯೆ ಸೃಷ್ಟಿಸುತ್ತಿದ್ದು, ಆಸ್ಪತ್ರೆ ಅಗತ್ಯತೆ ಬೀಳುತ್ತಿದೆ. ಈ ಬಗ್ಗೆಯೇ ಇಂದಿನ ಕೋವಿಡ್ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿದೆ.
ಬಿಬಿಎಂಪಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ತುಮಕೂರು, ಬೀದರ್, ಚಿತ್ರದುರ್ಗ, ಕೋಲಾರ, ವಿಜಯಪುರ, ಮೈಸೂರು, ಬೆಳಗಾವಿ, ದಕ್ಷಿಣಕನ್ನಡ, ಧಾರವಾಡ ಹಾಗೂ ಹಾವೇರಿ ಜಿಲ್ಲೆಗಳಲ್ಲಿನ ಲಸಿಕಾಕರಣದ ಕುರಿತು ಸಿಎಂ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ.
ಇದನ್ನೂ ಓದಿ: ಗ್ರಾಮೀಣ ಪ್ರದೇಶ, ಮಕ್ಕಳಲ್ಲಿ ಸೋಂಕು ಕುರಿತು ನಿಗಾ ಇರಿಸಲು ಸಿಎಂ ಸೂಚನೆ: ಸಚಿವ ಸುಧಾಕರ್