ಬೆಂಗಳೂರು: ಅಂತಾರಾಜ್ಯ ಜಲವಿವಾದಗಳ ಬಗ್ಗೆ ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದೊಯ್ದು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದ್ದೇವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ವಿಧಾನಸೌಧದಲ್ಲಿ ಅಂತಾರಾಜ್ಯ ಜಲವಿವಾದ ಬಗ್ಗೆ ಸರ್ವಪಕ್ಷ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಜಲ ವಿವಾದಗಳ ಬಗ್ಗೆ ಸುದೀರ್ಘವಾದ ಚರ್ಚೆ ಆಗಿದೆ. ಮೇಕೆದಾಟು ಬಗ್ಗೆ ಚರ್ಚೆ ಆಗಿದೆ. ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಬಳಿ ಡಿಪಿಆರ್ ಇದೆ. ಇದರ ಬಗ್ಗೆ ಈಗಾಗಲೇ ಕೇಂದ್ರಕ್ಕೆ ಪತ್ರ ಬರೆಯಲಾಗಿದೆ. ಪ್ರಾಧಿಕಾರದ ಪ್ರೊಸೀಡಿಂಗ್ಸ್ ನಲ್ಲಿ ಏನೆಲ್ಲ ಚರ್ಚೆ ಆಗಿದೆ ಅಂತ ಮಾಹಿತಿ ಕೇಳಿದ್ದೇವೆ. ಕೇಂದ್ರದ ಪರಿಸರ ಇಲಾಖೆಯಿಂದಲೂ ಯೋಜನೆಗೆ ಅನುಮತಿ ಸಿಗಬೇಕಿದೆ. ಮುಂದಿನ ಸೋಮವಾರ ಅಥವಾ ಮಂಗಳವಾರ ದೆಹಲಿಗೆ ಗೋವಿಂದ ಕಾರಜೋಳ ಭೇಟಿ ನೀಡಲಿದ್ದಾರೆ. ಕೇಂದ್ರದ ಬಳಿ ಕಾರಜೋಳ ಅವರು ಇವತ್ತಿನ ಸಭೆ ಬಗ್ಗೆ ಮಾಹಿತಿ ತಿಳಿಸ್ತಾರೆ. ನಾನು ಅಧಿವೇಶನ ಮುಗಿದ ಬಳಿಕ ದೆಹಲಿಗೆ ಹೋಗ್ತೇನೆ. ಕೇಂದ್ರದ ಸಚಿವರ ಜತೆ ಎಲ್ಲ ಜಲವಿವಾದಗಳ ಬಗ್ಗೆಯೂ ಚರ್ಚೆ ನಡೆಸ್ತೇನೆ ಎಂದು ಹೇಳಿದರು.
ಮೇಕೆದಾಟು ಯೋಜನೆಗೆ ಆದಷ್ಟು ಬೇಗ ಪರಿಸರ ಇಲಾಖೆ ಅನುಮತಿ ಸಿಗುವ ವಿಶ್ವಾಸ ಇದೆ. ಇದೆಲ್ಲ ಆದ ಬಳಿಕ ಅಗತ್ಯವಾದರೆ ಸರ್ವಪಕ್ಷ ನಾಯಕರ ನಿಯೋಗವನ್ನು ಕರೆದೊಯ್ಯಲು ನಿರ್ಧರಿಸಿದ್ದೇವೆ. ಅಗತ್ಯ ಕಂಡುಬಂದರೆ ಕೇಂದ್ರಕ್ಕೆ ಸರ್ವಪಕ್ಷಗಳ ನಿಯೋಗ ಕೊಂಡೊಯ್ಯುತ್ತೇವೆ. ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ರಷ್ಯಾ-ಉಕ್ರೇನ್ ಯುದ್ಧ: ರಾಜಧಾನಿ ಕೀವ್ ಸಮೀಪವೇ ಕ್ಷಿಪಣಿ ದಾಳಿ, ವಸತಿ ಪ್ರದೇಶಗಳಲ್ಲಿ ಜೀವ ಭೀತಿ
ಅಂತಾರಾಜ್ಯ ನದಿ ಜೋಡಣೆ ಬಗ್ಗೆಯೂ ಚರ್ಚೆ ಆಗಿದೆ. ನಮ್ಮ ರಾಜ್ಯದ ನೀರಿನ ಪಾಲು ಪಡೆದ ಬಳಿಕ ನದಿ ಜೋಡಣೆಗೆ ಒಪ್ಪುತ್ತೇವೆ. ಈ ನಿಲುವು ನಮ್ಮದಾಗಿದೆ. ಇದೇ ನಿಲುವು ಕೇಂದ್ರದ ಎದುರು ಇಡ್ತೇವೆ. ನದಿ ಜೋಡಣೆ ಯೋಜನೆಯ ತಾಂತ್ರಿಕ ಅಂಶಗಳನ್ನು ಕೇಂದ್ರದಿಂದ ಆದಷ್ಟು ಬೇಗ ಪಡೆದುಕೊಳ್ತೇವೆ ಎಂದು ವಿವರಿಸಿದರು.
ಅದೇ ರೀತಿ ಮಹದಾಯಿ ಯೋಜನೆ ಸಂಬಂಧ ಪರಿಸರ ಇಲಾಖೆಯ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದು. ಕೃಷ್ಣಾ ಮೇಲ್ದಂಡೆ ಯೋಜನೆ ಬಗ್ಗೆಯೂ ಕೂಡಲೇ ಅಧಿಸೂಚನೆ ಹೊರಡಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ಸೂಚನೆ ನೀಡಲಾಗಿದೆ. ಈಗಾಗಲೇ ಸುಪ್ರೀಂ ಕೋರ್ಟ್ ನಲ್ಲಿ ಈ ವಿಚಾರಣೆ ನಡೆಸುತ್ತಿರುವ ಇಬ್ಬರು ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದಿದ್ದಾರೆ. ಇಬ್ಬರು ಹೊಸ ನ್ಯಾಯಮೂರ್ತಿ ನೇಮಿಸಲು ಸುಪ್ರೀಂ ಕೋರ್ಟ್ ಗೆ ಒತ್ತಾಯ ಮಾಡಲಿದ್ದೇವೆ. ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಪ್ರಕಟಿಸುವ ವಿಶ್ವಾಸ ಇದೆ ಎಂದು ತಿಳಿಸಿದರು.
ರಾಜ್ಯದ ಜಲಯೋಜನೆಗಳಿಗೆ ವೇಗ ಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಈ ಬಗ್ಗೆ ಕೇಂದ್ರದ ಜತೆ ಚರ್ಚೆ ನಡೆಸ್ತೇವೆ. ಜಲವಿವಾದಗಳ ಬಗ್ಗೆ ಕಾನೂನು, ಆಡಳಿತಾತ್ಮಕ ತೊಂದರೆ ನಿವಾರಿಸಿ, ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ಅಗತ್ಯ ಬಿದ್ದರೆ ಸರ್ವಪಕ್ಷ ನಿಯೋಗವನ್ನು ಕೊಂಡೊಯ್ಯುತ್ತೇವೆ ಎಂದರು.