ಬೆಂಗಳೂರು: ರಾಜ್ಯದಲ್ಲಿ ಖಾಲಿ ಇರುವ 2.5 ಲಕ್ಷ ಹುದ್ದೆಗಳನ್ನು ಹಂತ - ಹಂತವಾಗಿ ಭರ್ತಿ ಮಾಡಲಾಗುತ್ತದೆ ಹಾಗೂ ಶಿಥಿಲಗೊಂಡಿರುವ ಕೆಪಿಎಸ್ಸಿಗೆ ಆದಷ್ಟು ಬೇಗ ಕಾಯಕಲ್ಪ ನೀಡಿ ಯುಪಿಎಸ್ಸಿ ಮಾದರಿಯಲ್ಲಿ ಸದೃಢಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಎಸ್ ರವಿ ಪ್ರಶ್ನೆಗೆ ಉತ್ತರಿಸಿದ ಸಿಎಂ, ರಾಜ್ಯದಲ್ಲಿ 2.50 ಲಕ್ಷ ಹುದ್ದೆ ಖಾಲಿ ಇವೆ ಎಂಬುದನ್ನು ಒಪ್ಪಿಕೊಂಡರು.
ಅನೇಕ ವರ್ಷದಿಂದ ಆರ್ಥಿಕ ನಿರ್ಬಂಧ ಹೇರಲಾಗಿದೆ. 10-12 ವರ್ಷದಿಂದ ನಿರ್ಬಂಧವಿದೆ. ಹಾಗಾಗಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಹುದ್ದೆಗಳು ಖಾಲಿ ಉಳಿದಿವೆ. ಆದರೂ ಅಗತ್ಯವಿದ್ದ ಕಡೆ ರಿಯಾಯಿತಿ ನೀಡಿ ನೇಮಕ ಮಾಡಿಕೊಂಡು ಬರಲಾಗುತ್ತಿದೆ ಎಂದರು.
16 ಸಾವಿರ ಪೊಲೀಸ್, 15 ಸಾವಿರ ಶಿಕ್ಷಕರ ಹುದ್ದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ 14 ಸಾವಿರ ಹುದ್ದೆಗಳ ಭರ್ತಿಗೆ ಅನುಮತಿಸಲಾಗಿದೆ. ಹೀಗೆ ಹಂತ ಹಂತವಾಗಿ ಅಗತ್ಯಕ್ಕೆ ಅನುಗುಣವಾಗಿ ಹುದ್ದೆಗಳ ಭರ್ತಿ ಮಾಡಲಾಗುತ್ತದೆ. ನಮ್ಮ ಕಾಲದಲ್ಲಿ ಈ ಹುದ್ದೆಗಳು ಖಾಲಿ ಆಗಿರುವುದಲ್ಲ. ಹಲವಾರು ವರ್ಷಗಳಿಂದ ಆಗಿರುವುದಾಗಿದೆ. ಇವುಗಳ ಭರ್ತಿಗೆ ಇನ್ನು ಕೆಲವು ವರ್ಷ ಬೇಕಾಗಲಿದೆ. ಹಂತ ಹಂತವಾಗಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ ಎಂದು ಭರವಸೆ ನೀಡಿದರು.
ಕೆಪಿಎಸ್ಸಿಗೆ ಕಾಯಕಲ್ಪ: ಕೆಪಿಎಸ್ಗೆ ಕಾಯಕಲ್ಪ ಮಾಡುವುದು ಅಗತ್ಯವಿದೆ. ಪರೀಕ್ಷೆ ಮಾಡಿದ ನಂತರ, ಫಲಿತಾಂಶ ಬಂದ ನಂತರ, ಅಂತಿಮ ಪಟ್ಟಿ ಬಂದಾಗ, ಇಂಟರ್ ವ್ಯೂ ವೇಳೆ ಹೀಗೆ ಎಲ್ಲ ಹಂತದಲ್ಲೂ ತಕರಾರು ಬರುತ್ತಿದೆ. ಯುಪಿಎಸ್ಸಿ ಮಾದರಿಯಲ್ದಿದ್ದ ಕೆಪಿಎಸ್ಸಿ ಕಾಲ ಕಾಲಕ್ಕೆ ಬದಲಾವಣೆ ಮಾಡಿ ಶಿಥಿಲಗೊಂಡಿದೆ.
ಹಾಗಾಗಿ ಇದನ್ನು ಮತ್ತೆ ಸರಿಪಡಿಸಲು ಕಾಯಕಲ್ಪ ಮಾಡಲಾಗುತ್ತದೆ. ಆದಷ್ಟು ಬೇಗ ಇದನ್ನು ಸರಿಪಡಿಸಲಾಗುತ್ತದೆ. ಕೆಪಿಎಸ್ಸಿ ಇನ್ನಷ್ಟು ಸಿಬ್ಬಂದಿ ಒದಗಿಸವುದು ಅಗತ್ಯವಿದೆ. ಆದಷ್ಟು ಬೇಗ ನೇಮಕ ಮಾಡುವ ಕೆಲಸ ಮಾಡಲಾಗುತ್ತದೆ. ಕೆಪಿಎಸ್ಸಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಗಡಿ ಉಸ್ತುವಾರಿ ಸಚಿವರ ನೇಮಕ ಮರೆತ ರಾಜ್ಯ ಸರ್ಕಾರ