ಬೆಂಗಳೂರು: "ಕೇವಲ ಕಟ್ಟಡ ಕಟ್ಟಿದರೆ ಸಾಲದು. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನೂ ಕೊಡಬೇಕು. ಯಾವ ಯಾವ ಶಾಲೆಯಲ್ಲಿ ಏನೇನು ಆಗಬೇಕಿದೆ, ಅಭಿವೃದ್ಧಿಗೆ ಎಷ್ಟು ಹಣ ಖರ್ಚು ಮಾಡಲಾಗಿದೆ ಎಂದು ಪಟ್ಟಿ ಕೊಡಿ. ಶಾಲೆಗಳ ಸಮಗ್ರ ಅಭಿವೃದ್ಧಿಗೆ ನಾನು ಅನುದಾನ ಕೊಡುತ್ತೇನೆ" ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ನಗರದ ಅರಮನೆ ಮೈದಾನದಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಿಂದ ಆಯೋಜನೆ ಮಾಡಿರುವ "ವಿಜ್ಞಾನ ಮೇಳ 2023"ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಶಾಲೆಗಳು ಅಭಿವೃದ್ಧಿಯಾಗದೇ ಇರುವುದಕ್ಕೆ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಶಿಕ್ಷಣದ ಗುಣಮಟ್ಟ ಹೆಚ್ಚಿಸಿ: "ಶಾಲೆಗಳಿಗೆ ಕೊಡುವ ಅನುದಾನ ಜಾಸ್ತಿಯಾಗುತ್ತಿದೆ. ಅಭಿವೃದ್ಧಿ ಮಾತ್ರ ಸರಿಯಾಗಿ ಆಗುತ್ತಿಲ್ಲ. ಮಕ್ಕಳಿಗೆ ಬೇಕಾಗುವ ಎಲ್ಲ ಮೂಲಭೂತ ಸೌಕರ್ಯಗಳನ್ನು ಕೊಡಬೇಕು. ಮೊದಲು ಮಕ್ಕಳ ಭವಿಷ್ಯ, ಆ ನಂತರ ಕಾಂಟ್ಯಾಕ್ಟ್ರರ್ ಕಾಮಗಾರಿಗಳಿಗೆ ಆದ್ಯತೆ ನೀಡಬೇಕು. ವಸತಿ ಶಾಲೆಗಳಲ್ಲಿ ಕೇಲವ ಕಟ್ಟಡ ಹೆಚ್ಚಾಗುತ್ತಿದೆ. ಕೇವಲ ಕಾಂಟ್ರ್ಯಾಕ್ಟರ್ ಆಧಾರಿತ ಕೆಲಸ ಮಾಡಿದರೆ ಪ್ರಯೋಜನ ಇಲ್ಲ. ಬಿಲ್ಡಿಂಗ್ ವೆಚ್ಚ 5-10 ಕೋಟಿ ರೂ. ಆದರೆ ಇದೀಗ 20-30 ಕೋಟಿ ರೂ ಆಗಿದೆ. ಕೇವಲ ಕಟ್ಟಡ ಕಟ್ಟುವುದು ಬಿಟ್ಟು ಶಿಕ್ಷಣದ ಗುಣಮಟ್ಟ ಹೆಚ್ಚಿಸಿ" ಎಂದು ಸಲಹೆ ಅಧಿಕಾರಿಗಳಿಗೆ ಸಲಹೆ ನೀಡಿದರು.
ಇದನ್ನೂ ಓದಿ: 'ನಾನು ಸುಳ್ಳು ಭರವಸೆ ನೀಡುವ ಮುಖ್ಯಮಂತ್ರಿಯಲ್ಲ': ಕಾಗಿನೆಲೆ ಶ್ರೀಗಳಿಗೆ ಸಿಎಂ ಬೊಮ್ಮಾಯಿ ಸ್ಪಷ್ಟನೆ
ಸ್ಪರ್ಧಾತ್ಮಕ ಪರೀಕ್ಷೆ ಮಾಡಿ: "ವಸತಿ ಶಾಲೆ ಇಲ್ಲಿವರೆಗೂ ಎಸ್ಎಸ್ಎಲ್ಸಿ ವರೆಗೆ ಮಾತ್ರ ಇತ್ತು. ಬರುವ ವರ್ಷ ಅಲ್ಲಿ ಪಿಯುಸಿಯನ್ನು ಕಡ್ಡಾಯ ಮಾಡಿ. ಎಲ್ಲಿ ವ್ಯವಸ್ಥೆ ಇದೆಯೋ ಅಲ್ಲಿ ಪಿಯುಸಿ ಮುಂದುವರಿಸಬೇಕು. ಈ ಶಾಲೆಗಳಲ್ಲಿ ಒಂದು ಸ್ಪರ್ಧಾತ್ಮಕ ಪರೀಕ್ಷೆ ಮಾಡಿ" ಎಂದು ವೇದಿಕೆಯಲ್ಲಿದ್ದ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದರು.
"ತಂದೆ ತಾಯಂದಿರು ಸಾಕಷ್ಟು ನಿರೀಕ್ಷೆ ಇಟ್ಟು ಮಕ್ಕಳನ್ನು ವಸತಿ ಶಾಲೆಗೆ ಕಳಿಸಿ ಕೊಡುತ್ತಾರೆ. ಮಕ್ಕಳ ಭವಿಷ್ಯ ರೂಪಿಸಿದರೆ ಸಮಾಜದಲ್ಲಿ ಬದಲಾವಣೆ ಆಗುತ್ತದೆ. ವಸತಿ ಶಾಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಮಾಡಿ. ಮಕ್ಕಳು 60 ರಿಂದ 70 ಪರ್ಸೆಂಟ್ ಪಡೆದು ವಸತಿ ಶಾಲೆಗೆ ಬರುತ್ತಾರೆ. ವಸತಿ ಶಾಲೆಯಿಂದ ಹೊರಹೋಗುವಾಗ ಶೇ.90 ರಷ್ಟು ಫಲಿತಾಂಶ ಪಡೆದು ಹೋಗಬೇಕು" ಎಂದರು.
3 ಲಕ್ಷ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೇತೃತ್ವದಲ್ಲಿ ಉತ್ತಮ ಕೆಲಸಗಳಾಗಿವೆ. 3 ಲಕ್ಷ ಶಾಲಾ ಹೆಣ್ಣು ಮಕ್ಕಳಿಗೆ ಕರಾಟೆ ಕಲಿಸುತ್ತಿರುವುದು ದೊಡ್ಡ ಸಾಧನೆ. ಸಮಾದಲ್ಲಿ ಅಸ್ಪೃಶ್ಯತೆ ನಿವಾರಣೆಗೆ ಸಚಿವರು ಕ್ರಮ ಕೈಗೊಂಡಿದ್ದಾರೆ. ಎಸ್ಸಿ, ಎಸ್ಟಿ ಜನಾಂಗಕ್ಕೆ ಸೌಲಭ್ಯಗಳನ್ನು ನೀಡಲು ಒತ್ತಾಸೆಯಾಗಿ ಕೆಲಸ ಮಾಡಿದ್ದಾರೆ. ಅವರು ಬಂದ ನಂತರ ಪ್ರತಿ ಮನೆಗೆ 1.75 ಲಕ್ಷ ರೂ.ಗಳಿಗೆ ಹೆಚ್ಚಳ, 75 ಯೂನಿಟ್ ಉಚಿತ ವಿದ್ಯುತ್, ಜಮೀನು ಖರೀದಿಗೆ 20.ಲಕ್ಷ ರೂ.ಗಳ ಯೋಜನೆ, ಎಸ್ಸಿಗೆ ಶೇ.15 ರಿಂದ 17ಕ್ಕೆ ಹಾಗೂ ಎಸ್ಟಿಗೆ ಶೇ 3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಲಾಗಿದೆ ಎಂದರು.
ಯುವಕರಿಗೆ ಸ್ವಯಂ ಉದ್ಯೋಗ: ದೀನ-ದಲಿತರು ಕೀಳರಿಮೆಯಿಂದ ದೂರಾಗಿ, ಅವರೂ ಮುಖ್ಯ ವಾಹಿನಿಯಲ್ಲಿ ಸೇರಲು ಬಾಬು ಜಗಜೀವನ್ ರಾಂ ಅವರ ಹೆಸರಿನಲ್ಲಿ ಪ್ರತಿ ಕ್ಷೇತ್ರಕ್ಕೆ 100 ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಕಾರ್ಯಕ್ರಮ ರೂಪಿಸಲಾಗಿದೆ. ಉದ್ಯೋಗ, ಶಿಕ್ಷಣ ಮತ್ತು ಸಬಲೀಕರಣ ಎಂಬ ಮೂರನ್ನೂ ದೊಡ್ಡ ಪ್ರಮಾಣದಲ್ಲಿ ಇಲಾಖೆ ಮಾಡುತ್ತಿದೆ. ಈ ಪ್ರಯಾಣವನ್ನು ಬದುಕಿನಲ್ಲಿ ಮುಂದುವರೆಸಿ ಸಾಧಕರಾಗಬೇಕು. ತಮ್ಮ ಕುಟುಂಬ, ಊರು, ಸಮುದಾಯಕ್ಕೆ ಹಿಂದಿರುಗಿ ಸಹಾಯ ಮಾಡಬೇಕು. ಆಗ ಸಮಾಜ ಪರಿವರ್ತನೆಯಾಗುತ್ತದೆ. ಇದರಿಂದ ನಾಡು ಮತ್ತು ದೇಶ ಶಕ್ತಿಶಾಲಿಯಾಗಿ ಬೆಳೆಯುತ್ತದೆ. ಇದೇ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸಬ್ ಕೆ ಸಾಥ್, ಸಬ್, ಕಾ ವಿಕಾಸ್, ಸಬ್ ಕ ಪ್ರಯಾಸ್ ಎಂಬ ಧ್ಯೇಯ ಎಂದರು.
ಉತ್ತಮ ಪ್ರಯೋಗ: ವಿಜ್ಞಾನ ಮೇಳ ಆಯೋಜಿಸಿದ್ದು, ಮಕ್ಕಳಲ್ಲಿರುವ ವೈಜ್ಞಾನಿಕ ಮನೋಭಾವವನ್ನು ಹಾಗೂ ಪ್ರತಿಭೆ ಪ್ರದರ್ಶಿಸಲು ಅನುಕೂಲವಾಗಿದೆ. ವಿಜ್ಞಾನ ಮತ್ತು ಅವಕಾಶ ವಂಚಿತ ವರ್ಗ ಬಹಳ ದೂರವಾಗಿತ್ತು. ವಿಜ್ಞಾನ ಕಲಿಯುವುದೇ ಕಷ್ಟ ಎನ್ನುವ ಕಾಲವಿತ್ತು. ಕೇವಲ ಅಕ್ಷರ ಜ್ಞಾನ ಪಡೆದರೆ ಸಾಕೆನ್ನುವ ಕಾಲವಿತ್ತು. ಈಗ ಬದಲಾವಣೆ ಆಗಿದೆ. ವಿಜ್ಞಾನವನ್ನು ಅವಕಾಶ ವಂಚಿತ ವರ್ಗದವರಿಗೆ ಸೇರಿಸಿ, ಮುನ್ನಡೆಸುತ್ತಿರುವುದು ಬಹಳ ದೊಡ್ಡ ಬದಲಾವಣೆ ತರಲಿದೆ. ಶ್ರೇಷ್ಠ ವಿಚಾರ ಮತ್ತು ಕಾರ್ಯಕ್ರಮ ಆಯೋಜಿಸಿದ ಕ್ರೈಸ್ ಸಂಸ್ಥೆಗೆ ಅಭಿನಂದನೆ. ಮಕ್ಕಳು ವಿಜ್ಞಾನ, ಗಣಿತ ಎಲ್ಲಾ ರಂಗಗಳಲ್ಲಿ ಮುಂದೆ ಬರಬೇಕು. ಆ ನಿಟ್ಟಿನಲ್ಲಿ ಇದೊಂದು ಉತ್ತಮ ಪ್ರಯೋಗ ಎಂದು ಸಿಎಂ ಬೊಮ್ಮಾಯಿ ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಗೋವಿಂದ ಕಾರಜೋಳ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ.ಮಣಿವಣ್ಣನ್ ಹಾಗೂ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಮುಖ್ಯಸ್ಥರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳಂತೆ ಸೌಲಭ್ಯ ದೊರಕಬೇಕು: ಪಿಇಎಸ್ ವಿವಿ ಕುಲಪತಿ