ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಡಿಸೆಂಬರ್ ಅಂತ್ಯದ ವೇಳೆಗೆ ಮೂರು ಲಕ್ಷ ಎಲ್‍ಇಡಿ ಬೀದಿ ದೀಪ ಅಳವಡಿಸಲು ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಆರ್. ಮಂಜುನಾಥ್ ಅವರ ಪ್ರಶ್ನೆಗೆ ಸಿಎಂ ಉತ್ತರಿಸಿದರು. ಐದು ಹಂತದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಕೆಯಾಗಲಿದೆ. ಐದೂ ಕಡೆಯೂ ಏಕಕಾಲಕ್ಕೆ ಪ್ರಾರಂಭಿಸಲು ಸೂಚಿಸಲಾಗುವುದು ಎಂದು ಹೇಳಿದರು.
ಒಂದು ವೇಳೆ ನಿಗದಿತ ಸಮಯದಲ್ಲಿ ಎಲ್‍ಇಡಿ ಬಲ್ಬ್ ಅಳವಡಿಸದಿದ್ದರೆ, ಈಗಾಗಲೇ ಆಗಿರುವ ಕರಾರನ್ನು ಮರು ಪರಿಶೀಲನೆ ಮಾಡಲಾಗುವುದು. ಕಾಲ ಮಿತಿಯಲ್ಲಿ ಮಾಡದಿದ್ದರೆ ವಾರಕ್ಕೆ ಒಂದು ಲಕ್ಷ ರೂ. ದಂಡ ವಿಧಿಸುವ ಕರಾರು ಸಹ ಇದೆ ಎಂದರು.
ಕಳೆದ 2018ರಲ್ಲಿ ಬಿಬಿಂಎಂಪಿ ವ್ಯಾಪ್ತಿಯ 198 ವಾರ್ಡ್‍ಗಳಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು ಎಲ್‍ಇಡಿ ಬಲ್ಬ್ ಅಳವಡಿಸುವ ಪ್ರಕ್ರಿಯೆ ಪ್ರಾರಂಭವಾದರೂ 2019ರಲ್ಲಿ ಅನುಮೋದನೆಯಾಗಿತ್ತು. ಎರಡು ವರ್ಷಗಳ ಕಾಲ ಅನುಮೋದನೆ ಗುತ್ತಿಗೆ ನೀಡುವುದರಲ್ಲೇ ಕಳೆದು ಹೋಗಿದೆ. ಹಲವು ಕಡೆ ಡಾರ್ಕ್ ಸ್ಪಾಟ್ ಸೃಷ್ಟಿಯಾಗಿದೆ.
ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ ಶೇ.85.5ರಷ್ಟು ಗರಿಷ್ಠ ವಿದ್ಯುತ್ ಉಳಿಸುವ ಉದ್ದೇಶದಿಂದ ಶಾಪುರ್‍ಜಿ-ಪಲೊಂಜಿ ಕಂಪನಿ, ಎಸ್‍ಎಂಸಿ ಇನ್‍ಫ್ರಾಸ್ಟ್ರಕ್ಚರ್ ಪ್ರೈ ಲಿಮಿಟೆಡ್ ಹಾಗೂ ಸಮುದ್ರ ಎಲೆಕ್ಟ್ರಾನಿಕ್ ಸಿಸ್ಟಮ್ಸ್ಗೆ ವಹಿಸಲಾಗಿದೆ. ಯೋಜನೆಯ ಒಪ್ಪಂದದ ಪ್ರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ 4 ಲಕ್ಷದ 85 ಸಾವಿರದ 286 ಬೀದಿ ದೀಪಗಳನ್ನು ಐದು ಹಂತ, 30 ತಿಂಗಳಲ್ಲಿ ಅಳವಡಿಸಬೇಕಿದೆ ಎಂದು ತಿಳಿಸಿದರು.
ಮೊದಲ ಹಂತದಲ್ಲಿ 1 ಲಕ್ಷ ಬೀದಿ ದೀಪಗಳನ್ನು ಆರ್ ಆರ್ ನಗರ, ದಾಸರಹಳ್ಳಿ, ಬೊಮ್ಮನಹಳ್ಳಿ ವಲಯದ ವಾರ್ಡ್ ಗಳನ್ನು ಆಯ್ಕೆ ಮಾಡಲಾಗಿದೆ. 2020ರ ಜೂನ್ 18ರಿಂದ ಸರ್ವೆ ಕಾರ್ಯ ಪ್ರಾರಂಭಿಸಲಾಗಿದೆ. ಜಂಟಿ ಸಮೀಕ್ಷೆ ಹಾಗೂ ಬೇಸ್‍ಲೈನ್ ಸರ್ವೆ ಕಾರ್ಯ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಿದರು.
2ನೇ ಹಂತದಲ್ಲಿ ಬೊಮ್ಮನಹಳ್ಳಿ ವಲಯದ 8 ವಾರ್ಡ್‍ಗಳಲ್ಲಿ ಜಂಟಿ ಸಮೀಕ್ಷೆ ಪ್ರಗತಿಯಲ್ಲಿದೆ. ಮೊದಲನೆ ಹಂತದ ಯೋಜನೆ ಏಪ್ರಿಲ್ 18ರೊಳಗೆ ಪೂರ್ಣಗೊಳ್ಳಬೇಕಿತ್ತು. ಕೋವಿಡ್ ಲಾಕ್ಡೌನ್ನೊಂದಿಗೆ ಉಂಟಾದ ನಿರ್ಬಂಧದಿಂದ ವಿಳಂಬವಾಗಿದೆ. ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಲು ಸೂಚಿಸಲಾಗಿದೆ ಎಂದರು.
ಇ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿರುವುದರಿಂದ ಬಿಬಿಎಂಪಿಯು ಯಾವುದೇ ಎಲ್‍ಇಡಿ ಬಲ್ಬ್ ಪರಿವರ್ತನೆ ಅಥವಾ ಅಳವಡಿಕೆ ಕಾರ್ಯ ಕೈಗೊಳ್ಳುವಂತಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಆದರೂ, ಜನರಿಗೆ ತೊಂದರೆಯಾಗದಂತೆ ಹೊಸ ಲೈಟ್‍ಗಳನ್ನು ಹಾಕಲು ಬೀದಿ ದೀಪ ನಿರ್ವಹಣೆ ಮಾಡಲು ಪಾಲಿಕೆಗೆ ಸೂಚನೆ ಕೊಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ದಾಸರಹಳ್ಳಿ ವಲಯ ವ್ಯಾಪ್ತಿಯ 8 ವಾರ್ಡ್‍ಗಳಲ್ಲಿ ಜಂಟಿ ಸಮೀಕ್ಷೆ ಹಾಗೂ ಬೇಸ್‍ಲೈನ್ ಸರ್ವೆ ಕಾರ್ಯ ಪೂರ್ಣವಾಗಿದೆ. ಡಿಸೆಂಬರ್ ಒಳಗೆ ಎಲ್‍ಇಡಿ ದೀಪ ಅಳವಡಿಕೆ ಕಾರ್ಯ ಪೂರ್ಣಗೊಳಿಸಲಾಗುತ್ತದೆ ಎಂದರು.
ಹಾಲಿ ಇರುವ ಬೀದಿ ದೀಪ ನಿರ್ವಹಣೆಯನ್ನು ಚಾಲ್ತಿಯಲ್ಲಿರುವ ಬೀದಿ ದೀಪಗಳ ನಿರ್ವಹಣೆ ಗುತ್ತಿಗೆದಾರರ ಮೂಲಕ ಕೈಗೊಳ್ಳಲಾಗುವುದು. ಶಿವಾಜಿನಗರ ಮತ್ತು ಆರ್ ಆರ್ ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ದೀಪ ಅಳವಡಿಕೆ ಕಾರ್ಯ ಪ್ರಾರಂಭವಾಗಿದೆ. ದಾಸರಹಳ್ಳಿ ಕ್ಷೇತ್ರದಲ್ಲಿ ಮೊದಲ ಪ್ರಾಶಸ್ತ್ಯದಲ್ಲಿ ಎಲ್‍ಇಡಿ ದೀಪ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ಆರ್. ಮಂಜುನಾಥ್, ರಾಮಲಿಂಗಾರೆಡ್ಡಿ, ರವಿಸುಬ್ರಮಣ್ಯ, ಅರವಿಂದ ಲಂಬಾವಳಿ ಅವರು ಎಲ್ಲಾ ಕ್ಷೇತ್ರಗಳಲ್ಲೂ ಬೀದಿ ದೀಪ ಸಮಸ್ಯೆ ಇದೆ. ಹೊಸ ದೀಪ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಓದಿ: ಎತ್ತಿನಹೊಳೆ ಯೋಜನೆ ಸಂಬಂಧ ಸದ್ಯದಲ್ಲೇ ಸಭೆ : ಸಿಎಂ ಬಸವರಾಜ ಬೊಮ್ಮಾಯಿ